ಬೆಂಗಳೂರು: ಸಮಯ್ ರೈನಾ ನಿರೂಪಣೆಯ ಜನಪ್ರಿಯ ಶೋ ‘ಇಂಡಿಯಾಸ್ ಗಾಟ್ ಲೇಟೆಂಟ್’ (India’s Got Latent) ಮೂಲಕ ಮನೆಮಾತಾಗಿರುವ, ಬಾಲಿವುಡ್‌ನ ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಹಾಗೂ ನಟ ನಮನ್ ಅರೋರಾ ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದು, ಕನ್ನಡ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಕಾಮಿಡಿ ಜಗತ್ತು ಹಾಗೂ ಬಾಲಿವುಡ್ ಪಯಣ:
ಡಿಜಿಟಲ್ ಶೋಗಳಲ್ಲಿ ತಮ್ಮ ಅದ್ಭುತ ಕಾಮಿಕ್ ಟೈಮಿಂಗ್ ಹಾಗೂ ಪ್ರಬುದ್ಧ ಅಭಿನಯದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದ ನಮನ್ ಅರೋರಾ, ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಕೇವಲ ಸ್ಟ್ಯಾಂಡಪ್ ಕಾಮಿಡಿಗಷ್ಟೇ ಸೀಮಿತವಾಗದೆ, 2022ರಲ್ಲಿ ತೆರೆಕಂಡ ಬಾಲಿವುಡ್‌ನ ‘ಜುಗ್ ಜುಗ್ ಜೀಯೋ’, 2024ರ ‘ಮಿಸ್ಟರ್ & ಮಿಸೆಸ್ ಮಹಿ’ ಹಾಗೂ ಜನಪ್ರಿಯ ವೆಬ್ ಸರಣಿ ‘ಕಾಲ್ ಮಿ ಬೇ’ (Call me Bae) ಪ್ರಾಜೆಕ್ಟ್‌ಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಹೊಸ ಭಾಷೆ, ಹೊಸ ಸವಾಲು:
ದೂರದರ್ಶನ ಹಾಗೂ ಒಟಿಟಿ ವೇದಿಕೆಗಳಲ್ಲಿ ಪಳಗಿರುವ ನಮನ್ ಅರೋರಾ, ಇದೀಗ ಪ್ರಾದೇಶಿಕ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ‘ಬೆಲ್ ಬಾಟಂ’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರು ನಿರ್ಮಿಸುತ್ತಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸುತ್ತಿರುವ ಅವರು, ಕನ್ನಡದ ಪ್ರೇಕ್ಷಕರ ಎದುರು ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಲು ಹೊರಟಿದ್ದು, ಚಿತ್ರದ ಮೇಲೆ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ.
