ರಾಜ್ಯದ ಗೃಹ ಸಚಿವರ ಒಡೆತನದ ಕಾಲೇಜಿನಲ್ಲೇ ಹೆಣ್ಣುಮಕ್ಕಳಿಗೆ ಭದ್ರತೆ ಇಲ್ಲವೇ ಎಂಬ ಗಂಭೀರ ಪ್ರಶ್ನೆಯೊಂದು ಇದೀಗ ಎದುರಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ. ಬೇಗೂರು ಸಮೀಪದಲ್ಲಿರುವ ಪ್ರತಿಷ್ಠಿತ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕನೊಬ್ಬ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪವಿತ್ರ ವೃತ್ತಿಯಲ್ಲಿದ್ದುಕೊಂಡು ತರಗತಿಯೊಳಗೆ ಅಸಭ್ಯವಾಗಿ ವರ್ತಿಸಿದ ಲೆಕ್ಚರರ್ ಅಬ್ದುಲ್ ಎಂಬಾತನಿಗೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿಯೇ ಅಟ್ಟಾಡಿಸಿ ಧರ್ಮದೇಟು ನೀಡಿದ್ದಾರೆ.
ತರಗತಿಯೊಳಗೆ ಪಾಠ ಮಾಡಬೇಕಿದ್ದ ಉಪನ್ಯಾಸಕ ಅಬ್ದುಲ್, ವಿದ್ಯಾರ್ಥಿನಿಯ ಬಳಿ ತೆರಳಿ ಹೂವು ಹಾಗೂ ಚಾಕೊಲೇಟ್ ಕೊಟ್ಟು ಪ್ರಪೋಸ್ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ಈ ಕೀಳು ಮಟ್ಟದ ವರ್ತನೆಯಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿ, ಆತನ ಪ್ರಪೋಸಲ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಲ್ಲದೆ, ಕ್ಲಾಸ್‌ರೂಮ್‌ನಲ್ಲಿಯೇ ಆತನಿಗೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ಒದ್ದು ತಕ್ಕ ಶಾಸ್ತಿ ಮಾಡಿದ್ದಾಳೆ. ಗುರುವಿನ ಈ ವಿಕೃತಿಯನ್ನು ಕಂಡು ಕೆರಳಿದ ಸಹಪಾಠಿಗಳು ಕೂಡ ಯುವತಿಯ ಬೆಂಬಲಕ್ಕೆ ನಿಂತು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆಯೊಡೆದಿದ್ದನ್ನು ಕಂಡ ಕಾಮುಕ ಉಪನ್ಯಾಸಕ ಅಬ್ದುಲ್, ವಿದ್ಯಾರ್ಥಿಗಳ ಕೈಯಿಂದ ಬಿಡಿಸಿಕೊಂಡು ಕಾಲೇಜು ಆವರಣದಿಂದಲೇ ಪರಾರಿಯಾಗಿದ್ದಾನೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಮಂತ್ರಿಗಳ ಒಡೆತನದ ಮೆಡಿಕಲ್ ಕಾಲೇಜಿನಲ್ಲೇ ಇಂತಹ ನಾಚಿಕೆಗೇಡಿನ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
