ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ (flash floods) ಉಂಟಾದ ಸಾ*ವಿನ ಸಂಖ್ಯೆ ಮಂಗಳವಾರ 987ಕ್ಕೆ ಏರಿಕೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಭದ್ರತಾ ಪಡೆಗಳು ಮತ್ತಷ್ಟು ಮೃ*ತದೇಹಗಳನ್ನು ಹೊರತೆಗೆದಿದ್ದು, ಸಾ*ವು-ನೋವಿನ ಪ್ರಮಾಣ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ. 583 ವಿದೇಶಿಯರು ಸೇರಿದಂತೆ ಸುಮಾರು 3,916 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ
ನೇಪಾಳ ಸೇನೆ ಸೇರಿದಂತೆ ವಿವಿಧ ಭದ್ರತಾ ಸಿಬ್ಬಂದಿಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ (NDRRMA) ಮಾಹಿತಿಯ ಪ್ರಕಾರ, ದೇಶದ ಒಟ್ಟು 8 ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಹಾನಿಗೀಡಾಗಿವೆ. ನಾಪತ್ತೆಯಾದವರಿಗಾಗಿ ಸಮರೋಪಾದಿಯಲ್ಲಿ ಹುಡುಕಾಟ ಮುಂದುವರಿದಿದೆ.
ಚಿತ್ವಾನ್‌ನಲ್ಲಿ ಅತಿ ಹೆಚ್ಚು ಸಾ*ವು
ಪ್ರವಾಹದಿಂದಾಗಿ ಅತಿ ಹೆಚ್ಚು ಸಾ*ವು-ನೋವುಗಳು ಚಿತ್ವಾನ್ (Chitwan) ಜಿಲ್ಲೆಯಲ್ಲಿ ವರದಿಯಾಗಿದ್ದು, ಅಲ್ಲಿ ಈವರೆಗೆ 321 ಮೃ*ತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಇದಲ್ಲದೆ, ನವಲ್ ಪರಾಸಿ ಈಸ್ಟ್‌ನಲ್ಲಿ 216, ನವಲ್ ಪರಾಸಿ ವೆಸ್ಟ್‌ನಲ್ಲಿ 170, ನುವಾಕೋಟ್‌ನಲ್ಲಿ 95, ಗೂರ್ಖಾದಲ್ಲಿ 65, ಧಾಡಿಂಗ್‌ನಲ್ಲಿ 55, ತನಹುನ್‌ನಲ್ಲಿ 38 ಹಾಗೂ ರಸುವಾದಲ್ಲಿ 27 ಮೃ*ತದೇಹಗಳನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ. ಪ್ರವಾಹದ ಅವಘಡಗಳಲ್ಲಿ ಒಟ್ಟು 279 ಮಂದಿ ಗಾಯಗೊಂಡಿದ್ದು, ಈ ಪೈಕಿ 168 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
