S Shorts

ನಿರೂಪ್ ಭಂಡಾರಿಯ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರಕ್ಕೆ ಶಿವಣ್ಣ ಸಾಥ್: ವಿಶೇಷ ಪಾತ್ರದಲ್ಲಿ ಕರುನಾಡ ಚಕ್ರವರ್ತಿ!

ನಿರೂಪ್ ಭಂಡಾರಿಯ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರಕ್ಕೆ ಶಿವಣ್ಣ ಸಾಥ್: ವಿಶೇಷ ಪಾತ್ರದಲ್ಲಿ ಕರುನಾಡ ಚಕ್ರವರ್ತಿ!
Author: Sagaradventure
Posted By: Sagaradventure
Updated: Oct 23, 2026 | 11:46 AM

ಬೆಂಗಳೂರು: ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ವಿಶೇಷ ಅತಿಥಿ ಪಾತ್ರವೊಂದರಲ್ಲಿ (Cameo) ಕಾಣಿಸಿಕೊಂಡಿದ್ದು, ಅವರ ಎಂಟ್ರಿಯಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಅತ್ಯಂತ ವಿಭಿನ್ನ ಲುಕ್‌ನಲ್ಲಿ ಶಿವಣ್ಣ: 

ತಮ್ಮ ಪಾತ್ರದ ಕುರಿತು ಮಾತನಾಡಿರುವ ಶಿವರಾಜ್‌ಕುಮಾರ್, “ಈ ಸಿನಿಮಾವನ್ನು ನಾನು ಪ್ರಮುಖವಾಗಿ ನಿರೂಪ್, ಸಾಯಿಕುಮಾರ್ ಹಾಗೂ ಆ ವಿಶಿಷ್ಟ ಪಾತ್ರಕ್ಕಾಗಿಯೇ ಒಪ್ಪಿಕೊಂಡೆ. ತುಂಬಾ ಖುಷಿಪಟ್ಟು ಈ ಪಾತ್ರ ಮಾಡಿದ್ದೇನೆ. ನನ್ನ ಲುಕ್ ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ” ಎಂದಿದ್ದಾರೆ. ಇನ್ನು ಶೂಟಿಂಗ್ ಅನುಭವ ಹಂಚಿಕೊಂಡ ನಿರೂಪ್ ಭಂಡಾರಿ, “ಚಿತ್ರೀಕರಣದುದ್ದಕ್ಕೂ ಶಿವಣ್ಣ ಅವರು ನೀಡಿದ ಸಹಕಾರ ಮತ್ತು ಎನರ್ಜಿ ಇಡೀ ತಂಡಕ್ಕೆ ದೊಡ್ಡ ಸ್ಫೂರ್ತಿ ತಂದಿತು. ಅತ್ಯಂತ ಸರಳವಾಗಿ, ವೇಗವಾಗಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟರು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಚಿತ್ರದ ಕಥಾಹಂದರ ಹಾಗೂ ತಾರಾಗಣ: 

ಯುವ ನಿರ್ದೇಶಕ ಸಚಿನ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರ ಇದೊಂದು ಫ್ಯಾಮಿಲಿ ಎಂಟರ್‌ಟೇನರ್ ಆಗಿದೆ. ನಿರೂಪ್ ಇಲ್ಲಿ ‘ಸತ್ಯ’ ಎಂಬ ವಿಚಿತ್ರವಾಗಿ ಯೋಚಿಸಿ ಎಂತಹದ್ದೇ ಸಮಸ್ಯೆಯನ್ನೂ ಬಗೆಹರಿಸುವ ಬುದ್ಧಿವಂತ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ‘ಹರಿಶ್ಚಂದ್ರ’ನ ಪಾತ್ರಕ್ಕೆ ಹಿರಿಯ ನಟ ಸಾಯಿಕುಮಾರ್ ಜೀವ ತುಂಬಿದ್ದಾರೆ. ಬೃಂದಾ ಆಚಾರ್ಯ ಮತ್ತು ಅಂಕಿತಾ ಅಮರ್ ನಾಯಕಿಯರಾಗಿ ನಟಿಸಿದ್ದಾರೆ.

ಚಿತ್ರದ ಮೊದಲಾರ್ಧ ಸಂಪೂರ್ಣ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಸಾಮಾಜಿಕ ಕಳಕಳಿಯ ಜೊತೆಗೆ ಸಣ್ಣ ಕೋರ್ಟ್‌ ರೂಮ್‌ ಡ್ರಾಮಾ ಕೂಡ ಇರಲಿದೆ. ವಿಶೇಷವೆಂದರೆ, ಚಿತ್ರಕ್ಕೆ ನಿರೂಪ್‌ ಭಂಡಾರಿ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ತೀರ್ಥಹಳ್ಳಿ, ಚನ್ನಗಿರಿ ಸೇರಿದಂತೆ ಬಹುತೇಕ ಮಲೆನಾಡಿನ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ.

ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿದೆ.