S Shorts

ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ಪೋಸ್ಟ್: 3 ಲಕ್ಷ Followers ಕಳೆದುಕೊಂಡ ನಟಿ ಪರ್ಲೆ ಮಾನೆ!

ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ಪೋಸ್ಟ್: 3 ಲಕ್ಷ Followers ಕಳೆದುಕೊಂಡ ನಟಿ ಪರ್ಲೆ ಮಾನೆ!
Author: Sagaradventure
Posted By: Sagaradventure
Updated: Jul 26, 2026 | 3:56 PM

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ತಮ್ಮ ನಿಲುವನ್ನು ಸಮರ್ಥಿಸಿಕೊಂಡು ಪೋಸ್ಟ್ ಮಾಡಿದ್ದ ಜನಪ್ರಿಯ ನಟಿ, ಟಿವಿ ನಿರೂಪಕಿ ಹಾಗೂ ಬಿಗ್‌ಬಾಸ್ ಮಲಯಾಳಂ ಸೀಸನ್ 1 ವಿಜೇತೆ ಪರ್ಲೆ ಮಾನೆ (Pearle Maaney) ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿವಾದದ ಬೆನ್ನಲ್ಲೇ ಕೇವಲ ಎರಡೇ ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಅನ್ನು ಅವರು ಕಳೆದುಕೊಂಡಿದ್ದಾರೆ. ಜುಲೈ 24ರಂದು 2.7 ಮಿಲಿಯನ್ ಇದ್ದ ಅವರ ಫಾಲೋವರ್ಸ್ ಸಂಖ್ಯೆ ಇದೀಗ 2.4 ಮಿಲಿಯನ್‌ಗೆ ಕುಸಿದಿದೆ. ಇನ್‌ಸ್ಟಾಗ್ರಾಮ್ ಮಾತ್ರವಲ್ಲದೆ ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲೂ ಅವರ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಪರ್ಲೆ ಮಾನೆ ಪೋಸ್ಟ್‌ನಲ್ಲಿ ಏನಿತ್ತು? ಕಮೆಂಟ್ಸ್ ಆಫ್ ಮಾಡಿದ್ದಕ್ಕೆ ಆಕ್ರೋಶ 

ಇನ್‌ಸ್ಟಾಗ್ರಾಮ್‌ನಲ್ಲಿ ಉದ್ದನೆಯ ಪೋಸ್ಟ್ ಹಾಕಿದ್ದ ಅವರು, ವಿದ್ಯಾರ್ಥಿ ಪ್ರತಿಭಟನೆಗಳು ‘ನೋವಿನಿಂದ’ ಮತ್ತು ‘ಹೃದಯವಿದ್ರಾವಕ’ವಾಗಿವೆ ಎಂದಿದ್ದರು. “ದಯವಿಟ್ಟು ಯಾರು ಗಾಯಗೊಳ್ಳಬೇಡಿ, ಸುರಕ್ಷಿತವಾಗಿರಿ. ನಿಮ್ಮ ಜೀವಕ್ಕೆ ಅಪಾಯವಿದ್ದರೆ ಮನೆಗೆ ಹಿಂದಿರುಗಿ. ಯಾವುದೇ ಹೋರಾಟವು ಜೀವ ಕಳೆದುಕೊಳ್ಳುವಷ್ಟು ಮೌಲ್ಯಯುತವಾಗಿಲ್ಲ” ಎಂದು ಬರೆದಿದ್ದರು.

ಪೋಸ್ಟ್‌ಗೆ ಕಮೆಂಟ್ ಮಾಡುವುದನ್ನು ನಿರ್ಬಂಧಿಸಿದ್ದ (Disable) ಅವರು, “ಕಾಮೆಂಟ್ಸ್ ಸೆಕ್ಷನ್ ಅನ್ನು ಆಫ್ ಮಾಡಿರುವುದು ನನ್ನ ವಾಕ್ ಸ್ವಾತಂತ್ರ್ಯದ ಪ್ರತಿಬಿಂಬ” ಎಂದು ಕ್ಯಾಪ್ಷನ್ ನೀಡಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯಿತು. “ನೀವು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು, ನಮ್ಮ ಕಷ್ಟ ನಿಮಗೆ ಅರ್ಥವಾಗುವುದಿಲ್ಲ. ನಾವು ಪ್ರತಿಯೊಂದು ಅವಕಾಶಕ್ಕೂ ಹೋರಾಡಬೇಕು” ಎಂದು ಬಳಕೆದಾರರು ಅವರ ಇತರ ಪೋಸ್ಟ್‌ಗಳಲ್ಲಿ ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಖ್ಯಾತ ನಿರ್ದೇಶಕ ಸಿಬಿ ಮಲಯಿಲ್ ಪುತ್ರನಿಂದ ತೀಕ್ಷ್ಣ ತಿರುಗೇಟು 

ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಪರ್ಲೆ ಮಾನೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ನನ್ನ 4 ಪುಟದ ಪೋಸ್ಟ್‌ಗೆ ‘ವಿಫಲ ಚಲನಚಿತ್ರ ನಿರ್ಮಾಪಕರೊಬ್ಬರು’ (failed filmmaker) 10 ಪುಟಗಳ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ” ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದರು. ಅಲ್ಲದೆ, ಭಾರತದ ಧ್ವಜದಲ್ಲಿರುವ ಕೇಸರಿ ಬಣ್ಣ ನನ್ನ ನೆಚ್ಚಿನ ಬಣ್ಣ ಎಂದು ಉಲ್ಲೇಖಿಸಿದ್ದರು.

ಈ ಪೋಸ್ಟ್‌ಗೆ ಹಿರಿಯ ನಿರ್ದೇಶಕ ಸಿಬಿ ಮಲಯಿಲ್ ಅವರ ಪುತ್ರ ಜೋ ಮಲಯಿಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನೀವು ‘ವಿಫಲ ನಿರ್ಮಾಪಕ’ ಎಂದು ಕರೆದಿದ್ದು ನನ್ನ ತಂದೆಗೆ. ನಿಮ್ಮ ಅರ್ಥಹೀನ ಹಾಗೂ ಅರೆಬೆಂದ ರಾಜತಾಂತ್ರಿಕತೆಯನ್ನು ಓದಲು ನಿಮ್ಮ 5.7 ಮಿಲಿಯನ್ ಜನರಿಗೆ ಇಷ್ಟವಿಲ್ಲ. ನನ್ನ ತಂದೆ ಬೆನ್ನೆಲುಬಿಲ್ಲದ ಮಗನನ್ನು ಬೆಳೆಸಿಲ್ಲ. ನೀವು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೀರಿ, ಆಟವನ್ನು ನಾನೇ ಶುರು ಮಾಡುತ್ತೇನೆ. ನಿಮ್ಮ ಕೈಲಾದದ್ದನ್ನು ಮಾಡಿ” ಎಂದು ಜೋ ಮಲಯಿಲ್ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕವೇ ನೇರ ಎಚ್ಚರಿಕೆ ನೀಡಿದ್ದಾರೆ.