ಬೆಂಗಳೂರು: ಖ್ಯಾತ ಲೈಫ್ ಸೈನ್ಸ್ ಸಂಸ್ಥೆಯಾದ ಪಿಐ ಇಂಡಸ್ಟ್ರೀಸ್ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣವಾಗಿ ಅನ್ವೇಷಿಸಿ, ಅಭಿವೃದ್ಧಿಪಡಿಸಿದ ಸ್ವದೇಶಿ ಕೀಟನಾಶಕ ಸಂಯುಕ್ತ ‘ಪಯೋಕ್ಸಾನಿಲಿಪ್ರೋಲ್’ ಅನ್ನು ಮಂಗಳವಾರ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪಿಐ ಇಂಡಸ್ಟ್ರೀಸ್‌ನ 700ಕ್ಕೂ ಹೆಚ್ಚು ವಿಜ್ಞಾನಿಗಳ ಶ್ರಮ ಹಾಗೂ 10 ವರ್ಷಗಳ ನಿರಂತರ ವೈಜ್ಞಾನಿಕ ಸಂಶೋಧನೆಗೆ ಭಾರಿ ಜಯ ಸಿಕ್ಕಿದ್ದು, ಜಾಗತಿಕ ಕೃಷಿ ವಿಜ್ಞಾನ ಮತ್ತು ಬೌದ್ಧಿಕ ಆಸ್ತಿ ಸೃಷ್ಟಿಯಲ್ಲಿ ಭಾರತದ ಸಾಮರ್ಥ್ಯವನ್ನು ಇದು ಜಗತ್ತಿಗೆ ಸಾಬೀತುಪಡಿಸಿದೆ.
ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಈ ಬೃಹತ್ ಸಂಶೋಧನೆಗೆ ಭಾರತ ಸರ್ಕಾರದ ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ ಇದು ಭಾರತದಲ್ಲೇ ಸಂಶೋಧಿಸಲ್ಪಟ್ಟ ಮೊದಲ ಕೀಟನಾಶಕದ ಸಕ್ರಿಯ ಘಟಕ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 8 ದಶಕಗಳಿಂದ ರೈತರ ಸಮಸ್ಯೆಗಳನ್ನು ಅರಿತಿರುವ ಪಿಐ ಇಂಡಸ್ಟ್ರೀಸ್, ದೇಶದ ಕೃಷಿ ವಿಶ್ವವಿದ್ಯಾಲಯಗಳ ಜೊತೆಗೂಡಿ ಭಾರತದ ವೈವಿಧ್ಯಮಯ ಮಣ್ಣು ಮತ್ತು ಹವಾಮಾನಕ್ಕೆ ತಕ್ಕಂತೆ ಈ ಕೀಟನಾಶಕವನ್ನು ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.
ಈ ಮಹತ್ವದ ಸಾಧನೆಯ ಕುರಿತು ಪಿಐ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಹಾಗೂ ಎಂಡಿ ಮಯಾಂಕ್ ಸಿಂಘಾಲ್ ಪ್ರತಿಕ್ರಿಯಿಸಿದ್ದಾರೆ. ಭಾರತದ ಕೃಷಿ ಪದ್ಧತಿಯ ಆಳವಾದ ಅರಿವು ಮತ್ತು ವಿಶ್ವದರ್ಜೆಯ ವಿಜ್ಞಾನದ ಸಮ್ಮಿಲನದಿಂದ ಏನು ಸಾಧಿಸಬಹುದು ಎಂಬುದಕ್ಕೆ ಈ ಪಯೋಕ್ಸಾನಿಲಿಪ್ರೋಲ್ ಅತ್ಯುತ್ತಮ ಉದಾಹರಣೆಯಾಗಿದ್ದು, ಭಾರತದಲ್ಲೇ ಮೂಲ ಕೃಷಿ ವಿಜ್ಞಾನವನ್ನು ಹುಟ್ಟುಹಾಕುವ 10 ವರ್ಷಗಳ ಹಿಂದಿನ ಕನಸು ಇದೀಗ ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಪಿಐ ಇಂಡಸ್ಟ್ರೀಸ್ ಅಧ್ಯಕ್ಷ ನಾರಾಯಣ್ ಕೆ. ಶೇಷಾದ್ರಿ ಮಾತನಾಡಿ, ಇಂತಹ ಅದ್ಭುತವನ್ನು ಸೃಷ್ಟಿಸಲು ದೀರ್ಘಕಾಲೀನ ಬದ್ಧತೆ ಅತ್ಯಗತ್ಯವಾಗಿದ್ದು, ಭವಿಷ್ಯದ ಹೊಸ ಸಂಶೋಧನೆಗಳಿಗೆ ಇದು ಭದ್ರ ಬುನಾದಿಯಾಗಿದೆ ಎಂದು ಬಣ್ಣಿಸಿದ್ದಾರೆ.
1946ರಲ್ಲಿ ಸ್ಥಾಪನೆಯಾದ ಪಿಐ ಇಂಡಸ್ಟ್ರೀಸ್ ಕೃಷಿ ರಾಸಾಯನಿಕ ಉತ್ಪಾದನೆಯಲ್ಲಿ ವಿಶ್ವದ ಅಗ್ರ 5 ಕಂಪನಿಗಳಲ್ಲಿ ಒಂದಾಗಿದ್ದು, 40ಕ್ಕೂ ಹೆಚ್ಚು ದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಸಂಸ್ಥೆಯು 200ಕ್ಕೂ ಹೆಚ್ಚು ಪಿಎಚ್‌ಡಿ ತಜ್ಞರು ಸೇರಿದಂತೆ 4,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕೃಷಿ ವಿಜ್ಞಾನ, ರಾಸಾಯನಿಕ ಹಾಗೂ ಫಾರ್ಮಾ ವಲಯದಲ್ಲಿ 260ಕ್ಕೂ ಅಧಿಕ ಪೇಟೆಂಟ್‌ಗಳನ್ನು ಹೊಂದಿರುವ ಸಂಸ್ಥೆ, ಭಾರತ ಮತ್ತು ಅಮೆರಿಕದಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಪಯೋಕ್ಸಾನಿಲಿಪ್ರೋಲ್ ಕೇವಲ ಕೀಟನಾಶಕವಲ್ಲ, ಬದಲಾಗಿ ಕೃಷಿ ಸಂಶೋಧನೆಯಲ್ಲಿ ಭಾರತದ ಸ್ವಾವಲಂಬನೆಯ ಮಹತ್ವದ ಸಂಕೇತವಾಗಿದೆ.
