ಗುಜರಾತ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಇರಾನ್ ಯುದ್ಧದ ನೆಪದಲ್ಲಿ ದೇಶದಲ್ಲಿ ಎಲ್‌ಪಿಜಿ (LPG) ಮತ್ತು ರಸಗೊಬ್ಬರ ಕೊರತೆಯಾಗಲಿದೆ ಎಂದು ವದಂತಿ ಹಬ್ಬಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಭಿಲ್ಡಿಯಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಸಂಕಷ್ಟ ಕೆಲವರಿಗೆ ಖುಷಿ:
“ಇರಾನ್ ಯುದ್ಧದ ನಂತರ ರೈತರಿಗೆ ರಸಗೊಬ್ಬರ ಮತ್ತು ಜನರಿಗೆ ಎಲ್‌ಪಿಜಿ ಸಿಗುವುದಿಲ್ಲ ಎಂದು ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ದೇಶವು ಸಂಕಷ್ಟವನ್ನು ಎದುರಿಸುವಾಗ ಇವರು ಖುಷಿಪಡುತ್ತಾರೆ. ಕೇವಲ ಮೋದಿಯನ್ನು ಬದ್ನಾಮ್ ಮಾಡುವ ಉದ್ದೇಶದಿಂದ ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ” ಎಂದು ಪ್ರಧಾನಿ ಕಿಡಿಕಾರಿದರು. ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದ ವಿವಾದಾತ್ಮಕ ಟೀಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ಮೋದಿ, “ನನ್ನ ಜೀವನದ ಕೊನೆಯ ಕ್ಷಣದವರೆಗೂ ದೇಶದ ಜನರ ಸೇವೆ ಮಾಡುತ್ತಲೇ ಇರುತ್ತೇನೆ” ಎಂದು ಭಾವುಕರಾಗಿ ನುಡಿದರು.
ಪಿಎಂ-ಕಿಸಾನ್ 24ನೇ ಕಂತು ಬಿಡುಗಡೆ:
ಇದೇ ವೇಳೆ ಪ್ರಧಾನಿ ಮೋದಿಯವರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತನ್ನು ಬಿಡುಗಡೆ ಮಾಡಿದರು. ದೇಶಾದ್ಯಂತ ಸುಮಾರು 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 18,000 ಕೋಟಿ ರೂ.ಗೂ ಅಧಿಕ ಹಣವನ್ನು ನೇರವಾಗಿ ವರ್ಗಾಯಿಸಿದರು. ಗುಜರಾತ್‌ನ 50 ಲಕ್ಷಕ್ಕೂ ಹೆಚ್ಚು ರೈತರಿಗೆ 1,000 ಕೋಟಿ ರೂ. ಜಮೆಯಾಗಿದೆ. 2013-14ನೇ ಸಾಲಿಗೆ ಹೋಲಿಸಿದರೆ ದೇಶದ ಕೃಷಿ ಬಜೆಟ್ ಐದು ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು.
14,000 ಕೋಟಿ ರೂ. ಯೋಜನೆಗಳಿಗೆ ಚಾಲನೆ:
ಭಿಲ್ಡಿಯಲ್ಲಿ ಕಾಂಕ್ರೇಜ್ ತಳಿಯ ಹಸುಗಳ ಅಭಿವೃದ್ಧಿಗಾಗಿ 127 ಎಕರೆ ವಿಸ್ತೀರ್ಣದ ‘ಭಾರತ್ ಬೋವಿನ್ ಬ್ರೀಡಿಂಗ್ ಅಂಡ್ ರಿಸರ್ಚ್ ಸೆಂಟರ್’ ಸೇರಿದಂತೆ 14,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಥರಾಡ್ ಮತ್ತು ರಾಧನ್‌ಪುರದಲ್ಲಿ ಬನಾಸ್ ಡೈರಿಯ ಎರಡು ಬಯೋ-ಸಿಎನ್‌ಜಿ (Bio-CNG) ಘಟಕಗಳು ಹಾಗೂ ಪಾಲನ್‌ಪುರದಲ್ಲಿ ಆಲೂಗಡ್ಡೆ ಸಂಸ್ಕರಣಾ ಸೌಲಭ್ಯಗಳ ವಿಸ್ತರಣೆ ಯೋಜನೆಗಳಿಗೂ ಅವರು ಚಾಲನೆ ನೀಡಿದರು.
