ಬೆಂಗಳೂರು: ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ‘ಸೈಕಲ್ ಗ್ಯಾಪ್’ ಪಬ್(Cycle Gap Pub)ನಲ್ಲಿ ನಡೆದ ಗಲಾಟೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಕೇವಲ ವೈಯಕ್ತಿಕ ಗಲಾಟೆ ಎಂದುಕೊಂಡಿದ್ದ ಈ ಪ್ರಕರಣದ ಹಿಂದೆ ಈಗ ರಾಜಕೀಯ ಪಿತೂರಿಯ (Political Conspiracy) ಎಂದು ಹೇಳಲಾಗುತ್ತದೆ.
ಪಬ್‌ನಲ್ಲಿ ಮಧ್ಯರಾತ್ರಿ ಹುಡುಗಿಯರ ಫೋನ್ ನಂಬರ್ ಕೇಳಿದ ವಿಚಾರಕ್ಕೆ ಗಲಾಟೆ ಶುರುವಾಗಿದೆ. ನಂಬರ್ ನೀಡಲು ನಿರಾಕರಿಸಿದ ಯುವತಿಯರ ಜೊತೆ ಆರೋಪಿ ಉಮೇಶ್ ಅಸಭ್ಯವಾಗಿ ವರ್ತಿಸಿ, ಅವರನ್ನು ಎಳೆದಾಡಿದ ಆರೋಪ ಕೇಳಿಬಂದಿತ್ತು. ಆದರೆ, ಸ್ಥಳದಲ್ಲೇ ಬಗೆಹರಿಯಬೇಕಿದ್ದಈ ಕಿರಿಕ್ ಪೊಲೀಸ್ ಠಾಣೆ ಮೆಟ್ಟಿಲೇರಲು ಬೇರೆಯದೇ ಕಾರಣವಿದೆ ಎನ್ನಲಾಗುತ್ತಿದೆ.
ರಾಜಕೀಯ ಕೈವಾಡದ ಅನುಮಾನ:
ಆರೋಪಿ ಉಮೇಶ್ ಬಿಜೆಪಿಯ (BJP) ಮಾಜಿ ಸಚಿವರೊಬ್ಬರ ಅತ್ಯಾಪ್ತನಾಗಿದ್ದು, ಮುಂಬರುವ ಜಿಬಿಎ(GBA) ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದನು. ಮೂಲಗಳ ಪ್ರಕಾರ, ಉಮೇಶ್‌ನನ್ನು ಕಾಂಗ್ರೆಸ್‌ಗೆ ಸೇರುವಂತೆ ಒತ್ತಡ ಹೇರಲಾಗಿತ್ತು. ಆದರೆ “ನಮ್ಮ ನಾಯಕರನ್ನು ಬಿಟ್ಟು ಬರಲ್ಲ” ಎಂದು ಉಮೇಶ್ ಕಡಾಖಂಡಿತವಾಗಿ ಹೇಳಿದ್ದನು.
ಈ ಜಿದ್ದಿನ ಹಿನ್ನೆಲೆಯಲ್ಲಿಯೇ ಈ ಸಣ್ಣ ಗಲಾಟೆಯನ್ನು ದೊಡ್ಡದು ಮಾಡಲಾಗಿದೆಯೇ? ಎಂಬ ಪ್ರಶ್ನೆ ಮೂಡಿದೆ. ಪಬ್ ಮಾಲೀಕರು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯೊಬ್ಬರಿಗೆ ಆಪ್ತರಾಗಿದ್ದು, ಗಲಾಟೆ ತಾರಕಕ್ಕೇರಲು ಪಬ್ ಸಿಬ್ಬಂದಿಯ ಪ್ರಚೋದನೆಯೂ ಕಾರಣ ಎನ್ನಲಾಗುತ್ತಿದೆ.
ಸದ್ಯ ಜ್ಞಾನಭಾರತಿ ಪೊಲೀಸರು ಎರಡು ಕಡೆಯವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದು ಕೇವಲ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವೋ ಅಥವಾ ವ್ಯವಸ್ಥಿತ ರಾಜಕೀಯ ಸಂಚೋ ಎಂಬುದು ತನಿಖೆಯಿಂದ ಹೊರಬರಬೇಕಿದೆ.
