S Shorts

‘ರಾಜಕೀಯ ದುರುದ್ದೇಶದ ಕೇಸ್‌’: ಶಿಕ್ಷೆ ಅಮಾನತಿಗೆ ಪ್ರಜ್ವಲ್‌ ರೇವಣ್ಣ ಅರ್ಜಿ

‘ರಾಜಕೀಯ ದುರುದ್ದೇಶದ ಕೇಸ್‌’: ಶಿಕ್ಷೆ ಅಮಾನತಿಗೆ ಪ್ರಜ್ವಲ್‌ ರೇವಣ್ಣ ಅರ್ಜಿ
Author: StateNews Desk
Posted By: StateNews Desk
Updated: Dec 1, 2025 | 10:57 AM

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತಮ್ಮ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಜಾಮೀನು ನೀಡಬೇಕು ಎಂದು ಕೋರಿ ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಅವರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಪ್ರಜ್ವಲ್ ಪರ ವಕೀಲರ ಪ್ರಮುಖ ವಾದಾಂಶಗಳು

 ತಮ್ಮ ವಿರುದ್ಧ ಒಂದೇ ಬಾರಿಗೆ ನಾಲ್ಕು ಪ್ರತ್ಯೇಕ ಕ್ರಿಮಿನಲ್ ಕೇಸ್‌ಗಳನ್ನು ಹೇಗೆ ದಾಖಲಿಸಲಾಯಿತು? ಇದು ರಾಜಕೀಯ ದುರುದ್ದೇಶದಿಂದ ಕೂಡಿದ ಪ್ರಕರಣ ಎಂದು ಪ್ರಜ್ವಲ್ ವಕೀಲರು ವಾದಿಸಿದರು. ಪ್ರಜ್ವಲ್ ಅವರು ೨೦೨೪ರ ಏಪ್ರಿಲ್ ೨೪ರಂದು ದೇಶ ತೊರೆಯುವಾಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಏಪ್ರಿಲ್ ೨೮ರಂದು ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ ೨೦೧ರ ಅಡಿ ಸಾಕ್ಷ್ಯ ನಾಶಪಡಿಸಿರುವುದಕ್ಕೆ ಪ್ರೊ. ರವಿವರ್ಮ ಕುಮಾರ್ ಅವರು ಪ್ರಾಸಿಕ್ಯೂಟ್ ಮಾಡಿದ್ದಾರೆಯೇ? ಜಿಯೋ ಮ್ಯಾಪ್ ಅನ್ನು ವಿಚಾರಣಾಧೀನ ನ್ಯಾಯಾಧೀಶರು ಪರಿಗಣಿಸಿದ್ದಾರೆ. “ಇದನ್ನು ಹೊರತುಪಡಿಸಿ ಇನ್ನೂ ಮೂರು ಪ್ರಕರಣಗಳು ನನ್ನ ವಿರುದ್ಧ ಇವೆ. ಯಾವುದೇ ರೀತಿಯಲ್ಲೂ ನಾನು ದೇಶ ತೊರೆಯುವುದಿಲ್ಲ. ಅವೆಲ್ಲವನ್ನೂ ನಾನು ಎದುರಿಸುತ್ತೇನೆ” ಎಂದು ಲೂಥ್ರಾ ಪರವಾಗಿ ಪ್ರಜ್ವಲ್ ಹೇಳಿದರು.

ಅತ್ಯಾಚಾರಕ್ಕೆ ಒಳಗಾಗ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ಆರೋಪಿಯಲ್ಲ. ಪ್ರಜ್ವಲ್ ಅವರ ಮಾಜಿ ಕಾರು ಡ್ರೈವರ್ ವಿರುದ್ಧವೂ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಆದರೆ, ಈ ಪ್ರಕರಣದ ವಿಚಾರಣೆಯೇ ನಡೆದಿಲ್ಲ. ಇದು ಪ್ರತಿಕಾರವಲ್ಲವೇ? ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಜ್ವಲ್ ಪದೇಪದೇ ವಿಚಾರಣೆ ಮುಂದೂಡಿಕೆ ಕೋರಿದ್ದಾರೆ ಎಂಬ ಆರೋಪ ತಪ್ಪು. ೯೦ ದಿನದಲ್ಲಿ ವಿಚಾರಣೆ ಮುಗಿದಿದೆ. ವಿಶೇಷ ನ್ಯಾಯಾಧೀಶರು ೧೦ ದಿನ, ಮತ್ತು ಸಾರ್ವಜನಿಕ ರಜೆ ೧೨ ದಿನ ಇತ್ತು. ಹೀಗಾಗಿ, ವಿಚಾರಣೆ ವಿಳಂಬಗೊಳಿಸಿದ್ದೇನೆ ಎಂಬ ಪ್ರಾಸಿಕ್ಯೂಷನ್ ವಾದ ತರ್ಕಬದ್ಧವಾಗಿಲ್ಲ. ಸಂತ್ರಸ್ತೆಯು ಮೂರು ವರ್ಷ ಮೌನವಾಗಿದ್ದರು. ಆನಂತರ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಮೊದಲನೇ ಪ್ರಾಸಿಕ್ಯೂಷನ್ ಸಾಕ್ಷಿಯ ಹೇಳಿಕೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಂತ್ರಸ್ತೆಯ ಹೇಳಿಕೆ, ಇತರರ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ. ಸಂತ್ರಸ್ತೆ ಮತ್ತೆ ೨೦೨೩ಕ್ಕೆ ಮರಳಿ ತೋಟಕ್ಕೆ ಹೋಗಿದ್ದಾರೆ, ಆದರೆ ತನ್ನ ಉಡುಪುಗಳನ್ನು ತೆಗೆದುಕೊಂಡಿಲ್ಲ. ಗನ್ನಿಗಢ ತೋಟದಲ್ಲಿ ಸಂತ್ರಸ್ತೆ ಉಳಿದುಕೊಂಡ ಮನೆಯೇ ಇಲ್ಲ ಎನ್ನಲಾಗಿದೆ. “ಇಲ್ಲಿನ ಆಡಳಿತವು ಪ್ರತೀಕಾರ ತೆಗೆದುಕೊಂಡಿದೆ. ಸಂತ್ರಸ್ತೆಯನ್ನು ಅದಕ್ಕೆ ಬಳಕೆ ಮಾಡಿಕೊಂಡಿದೆ” ಎಂದು ಲೂಥ್ರಾ ಆರೋಪಿಸಿದರು.

ಪ್ರಾಸಿಕ್ಯೂಷನ್ ಮತ್ತು ಪೀಠದ ಪ್ರತಿಕ್ರಿಯೆ

ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು, “ನಮ್ಮ ವಾದಕ್ಕೆ ಪ್ರತಿಕ್ರಿಯಿಸಬೇಕು ಅಷ್ಟೇ. ಹೊಸ ವಿಚಾರಗಳನ್ನು ಸೇರ್ಪಡೆ ಮಾಡಬಾರದು” ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪೀಠವು ಲೂಥ್ರಾ ಅವರಿಗೆ, “ಆರೋಪ ಅಸ್ಪಷ್ಟವಾಗಿದ್ದರೆ ಅದನ್ನು ಆವಾಗಲೇ ನೀವು ಪ್ರಶ್ನಿಸಬೇಕಿತ್ತಲ್ಲವೇ?” ಎಂದು ಕೇಳಿತು. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.