ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ, ಅತ್ಯಾ*ಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಜಾ ಕೈದಿ ಪ್ರಜ್ವಲ್ ರೇವಣ್ಣ ಇದುವರೆಗೆ ಯಾವುದೇ ನ್ಯಾಯಾಲಯಕ್ಕಾಗಲಿ ಅಥವಾ ಜೈಲು ಮುಖ್ಯಾಧೀಕ್ಷಕರಿಗಾಗಲಿ ಪೆರೋಲ್ ಅಥವಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ.
ಅರ್ಜಿ ಸಲ್ಲಿಸಲು ಇರುವ ತಾಂತ್ರಿಕ ಕಾನೂನು ತೊಡಕುಗಳು
ಕಾನೂನು ನಿಯಮಗಳ ಪ್ರಕಾರ, ಯಾವುದೇ ಒಬ್ಬ ಕೈದಿಗೆ ಸಜೆಯಾದ ನಂತರ ಕನಿಷ್ಠ ಎರಡು ವರ್ಷಗಳು ಪೂರೈಕೆಯಾಗಿದ್ದರೆ ಮಾತ್ರ ನ್ಯಾಯಾಲಯಕ್ಕೆ ಇಂತಹ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಪ್ರಸ್ತುತ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾಗಿ ಈ ಅವಧಿ ಪೂರ್ಣಗೊಳ್ಳದ ಕಾರಣ ತಾಂತ್ರಿಕವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಕಷ್ಟಸಾಧ್ಯವಾಗಿದೆ. ಇದಲ್ಲದೆ, ಇವರ ಮೇಲಿರುವುದು ಗಂಭೀರ ಸ್ವರೂಪದ ಅತ್ಯಾ*ಚಾರ ಪ್ರಕರಣವಾಗಿರುವುದರಿಂದ, ಒಂದು ವೇಳೆ ಅರ್ಜಿ ಸಲ್ಲಿಸಿದರೂ ನ್ಯಾಯಾಲಯವು ಮಾನವೀಯತೆಯ ಆಧಾರದ ಮೇಲೆ ಹೊರಹೋಗಲು ಅನುಮತಿ ನೀಡುವುದು ತೀರಾ ಅನುಮಾನ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.
ಜೈಲಿನಲ್ಲೇ ಅಂತ್ಯಕ್ರಿಯೆ ವೀಕ್ಷಿಸಲು ಮನವಿ ಮಾಡುವ ಸಾಧ್ಯತೆ
ಹೊರಗೆ ಹೋಗಲು ಕಾನೂನಾತ್ಮಕ ಅವಕಾಶಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರಿಗೆ ವಿಶೇಷ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಅಜ್ಜಿಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಜೈಲಿನಲ್ಲೇ ಲೈವ್ ವೀಕ್ಷಿಸಲು ಅಥವಾ ಮಾನವೀಯತೆಯ ಆಧಾರದ ಮೇಲೆ ತಮ್ಮ ಸೆಲ್‌ನಲ್ಲಿಯೇ ಟಿವಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಕೋರಬಹುದು ಎನ್ನಲಾಗಿದೆ. ಆದರೆ, ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ಈ ಕ್ಷಣದವರೆಗೂ ಪ್ರಜ್ವಲ್ ರೇವಣ್ಣ ಕಡೆಯಿಂದ ಜೈಲು ಆಡಳಿತ ಮಂಡಳಿಗೆ ಯಾವುದೇ ಅಧಿಕೃತ ಮನವಿ ಪತ್ರ ಸಲ್ಲಿಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
