ದೋಹಾ: ಕತಾರ್‌ನಲ್ಲಿರುವ ಅನಿವಾಸಿ ಕನ್ನಡಿಗರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕನಸೊಂದು ನನಸಾಗುವ ಕಾಲ ಕೂಡಿಬಂದಿದೆ. ಕತಾರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲು ಭಾರತೀಯ ರಾಯಭಾರ ಕಚೇರಿಯಿಂದ (Indian Embassy) ಸಂಪೂರ್ಣ ಆಡಳಿತಾತ್ಮಕ ಹಾಗೂ ಸಾಂಸ್ಥಿಕ ಬೆಂಬಲವನ್ನು ನೀಡುವುದಾಗಿ ಪ್ರಥಮ ಕಾರ್ಯದರ್ಶಿ (ಶಿಕ್ಷಣ ಮತ್ತು ಸಾಂಸ್ಕೃತಿಕ) ಹರೀಶ್ ಪಾಂಡೆ ಅವರು ಮಹತ್ವದ ಭರವಸೆ ನೀಡಿದ್ದಾರೆ.
ನೂತನ ಸಮಿತಿಯಿಂದ ಭೇಟಿ
ಕರ್ನಾಟಕ ಸಂಘ ಕತಾರ್ (KSQ) ನ 2026-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯು, ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಇತ್ತೀಚೆಗೆ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿಗಳನ್ನು ಭೇಟಿ ಮಾಡಿತ್ತು. ಈ ವೇಳೆ ನೂತನ ಪದಾಧಿಕಾರಿಗಳ ಪರಿಚಯದ ಜೊತೆಗೆ, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಸಂಘವು ಹಮ್ಮಿಕೊಳ್ಳಲಿರುವ ಶೈಕ್ಷಣಿಕ ಯೋಜನೆಗಳು, ವಿದ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ಭಾಷಾ ತರಗತಿಗಳ ಆರಂಭದ ಕುರಿತು ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಲಾಯಿತು.
ಮುಖ್ಯವಾಹಿನಿಯಲ್ಲಿ ಕನ್ನಡ ಕಲಿಕೆಗೆ ಅವಕಾಶ
ಮುಂಬರುವ ಪೀಳಿಗೆಯ ಮಕ್ಕಳಲ್ಲಿ ನಮ್ಮ ಭಾಷೆ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಉಳಿಸುವ ಅಗತ್ಯವನ್ನು ಅರಿತ ಹರೀಶ್ ಪಾಂಡೆ ಅವರು, ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲೆಗಳ ಮುಖ್ಯವಾಹಿನಿಯಲ್ಲೇ ವ್ಯವಸ್ಥಿತವಾಗಿ ಕನ್ನಡ ಕಲಿಯುವ ಮುಕ್ತ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ರಾಯಭಾರ ಕಚೇರಿ ಬೆಂಬಲ ನೀಡಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಅಲ್ಲದೆ, ಮುಂಬರುವ ದಿನಗಳಲ್ಲಿ ಕರ್ನಾಟಕ ಸಂಘ ಕತಾರ್ ಹಮ್ಮಿಕೊಳ್ಳಲಿರುವ ಎಲ್ಲಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೂ ರಾಯಭಾರ ಕಚೇರಿಯು ಸದಾ ಪ್ರೋತ್ಸಾಹ ನೀಡಲಿದೆ ಎಂದು ಅವರು ಆಶ್ವಾಸನೆ ನೀಡಿದರು.
ಭಾರತೀಯ ರಾಯಭಾರ ಕಚೇರಿಯ ಈ ಸಕಾರಾತ್ಮಕ ಮತ್ತು ಪ್ರಗತಿಪರ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಪದಾಧಿಕಾರಿಗಳು, ಹರೀಶ್ ಪಾಂಡೆ ಅವರಿಗೆ ಸಾಂಪ್ರದಾಯಿಕ ಶಲ್ಯ ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
