S Shorts

Rapido ಬೈಕ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ; ಜಾಲತಾಣದಲ್ಲಿ ಕಹಿ ಅನುಭವ ಬಿಚ್ಚಿಟ್ಟ ಸಂತ್ರಸ್ತೆ!

Rapido ಬೈಕ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ; ಜಾಲತಾಣದಲ್ಲಿ ಕಹಿ ಅನುಭವ ಬಿಚ್ಚಿಟ್ಟ ಸಂತ್ರಸ್ತೆ!
Author: Sagaradventure
Posted By: Sagaradventure
Updated: Oct 20, 2026 | 12:18 PM

ಬೆಂಗಳೂರು: ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಪುಲಕೇಶಿನಗರದಲ್ಲಿ ರ್ಯಾಪಿಡೋ (Rapido) ಬೈಕ್ ಬುಕ್ ಮಾಡಿದ್ದ ಯುವತಿಯೊಬ್ಬರಿಗೆ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಈ ಕಹಿ ಅನುಭವವನ್ನು ಸಂತ್ರಸ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.

ಸೈಯದ್ ಎಂಬ ಹೆಸರಿನ ರ್ಯಾಪಿಡೋ ಚಾಲಕನ ವಿರುದ್ಧ ಯುವತಿ ಈ ಗಂಭೀರ ಆರೋಪ ಮಾಡಿದ್ದಾರೆ. ಮೂರು ದಿನಗಳ ಹಿಂದೆ ಪುಲಕೇಶಿನಗರದಲ್ಲಿರುವ ತಮ್ಮ ಮನೆಗೆ ತೆರಳಲು ಯುವತಿ ಬೈಕ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ಸೈಯದ್, ರೈನ್‌ಕೋಟ್ ಬೇಕೇ ಎಂದು ಪದೇಪದೆ ಕೇಳಿ ಅನಾವಶ್ಯಕವಾಗಿ ಮಾತನಾಡಿಸಲು ಯತ್ನಿಸಿದ್ದಾನೆ. ಯುವತಿ ನಿರಾಕರಿಸಿದರೂ ಆತನ ಅನುಚಿತ ವರ್ತನೆ ಮುಂದುವರಿದಿದೆ.

ಮನೆ ತಲುಪಿದ ಬಳಿಕ ಹೆಲ್ಮೆಟ್ ಹಿಂದಿರುಗಿಸುವ ನೆಪದಲ್ಲಿ ಚಾಲಕ ಯುವತಿಯ ಕೈ ಸವರಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಆನ್‌ಲೈನ್ ಪಾವತಿ ಮಾಡುವ ವೇಳೆ ಕ್ಯೂಆರ್ (QR) ಕೋಡ್ ಸ್ಕ್ಯಾನರ್ ವರ್ಕ್ ಆಗುತ್ತಿಲ್ಲ ಎಂದು ನಾಟಕವಾಡಿ ಯುವತಿಯ ಫೋನ್ ನಂಬರ್ ಪಡೆದುಕೊಳ್ಳಲು ಯತ್ನಿಸಿದ್ದಾನೆ. ಯುವತಿ ಹಣ ಪಾವತಿಸಿದ ಮೇಲೂ ಅಲ್ಲಿಂದ ಕದಲದೆ ಆಕೆಯನ್ನು ಗುರಾಯಿಸಿಕೊಂಡು ನಿಂತಿದ್ದಾನೆ. ಕೊನೆಗೆ ಸೆಕ್ಯೂರಿಟಿ ಗಾರ್ಡ್ ಬಂದು ಹೋಗಲು ಹೇಳಿದರೂ ಆತ ಅಲ್ಲಿಯೇ ನಿಂತು ಭಯ ಹುಟ್ಟಿಸುವಂತೆ ವರ್ತಿಸಿದ್ದಾನೆ.

ಈ ಆಘಾತಕಾರಿ ಅನುಭವದಿಂದ ಬೆಚ್ಚಿಬಿದ್ದಿರುವ ಯುವತಿ, ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳು ರ್ಯಾಪಿಡೋ ಬುಕ್ ಮಾಡುವ ಮುನ್ನ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ವಿವರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಸುರಕ್ಷತೆಗೆ ಸವಾಲಾಗಿರುವ ಇಂತಹ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ರ್ಯಾಪಿಡೋ ಸಂಸ್ಥೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.