ಬೆಂಗಳೂರು: ರಾಜಧಾನಿಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸುವಂತಹ ಘಟನೆಯೊಂದು ನಡೆದಿದೆ. ಕೆಲಸಕ್ಕೆ ತೆರಳಲು ರ್ಯಾಪಿಡೋ (Rapido) ಬೈಕ್ ಟ್ಯಾಕ್ಸಿ ಏರಿದ್ದ ಐಟಿ ಕಂಪನಿಯ ಮಹಿಳಾ ಮ್ಯಾನೇಜರ್ ಒಬ್ಬರ ಮೇಲೆ ಚಾಲಕ ಲೈಂ*ಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.
ನಾಗರಭಾವಿ 2ನೇ ಹಂತದ ನಿವಾಸಿಯಾಗಿರುವ 29 ವರ್ಷದ ಯುವತಿ, ಎಂಬೆಸಿ ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿರುವ ಐಟಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕಚೇರಿಗೆ ಹೋಗಲು ತಡವಾಗಿದ್ದರಿಂದ, ಸುಮಾರು 8 ಗಂಟೆಗೆ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಬೈಕ್ ಹತ್ತಿದ ಸ್ವಲ್ಪ ಸಮಯದಲ್ಲೇ ಚಾಲಕ ರೋಹಿತ್ (37) ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಚಾಲನೆ ಮಾಡುತ್ತಲೇ ಮಹಿಳೆಯನ್ನು ಸ್ಪರ್ಶಿಸಿ ವಿಕೃತಿ ಮೆರೆದಿದ್ದಾನೆ. ಗಾಬರಿಗೊಂಡ ಯುವತಿ, ಕೂಡಲೇ ಬೈಕ್ ನಿಲ್ಲಿಸುವಂತೆ ಮತ್ತು ಮರ್ಯಾದೆಯಿಂದ ವರ್ತಿಸುವಂತೆ ಎಚ್ಚರಿಸಿದರೂ, ಆತ ಬೈಕ್ ನಿಲ್ಲಿಸದೆ ಮುಂದುವರಿಸಿದ್ದಲ್ಲದೆ, ಅಂಡರ್‌ಪಾಸ್ ಒಂದರ ಬಳಿ ಬೈಕ್ ನಿಲ್ಲಿಸಿ ಮತ್ತೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಚಾಲಕನ ವರ್ತನೆಯಿಂದ ಬೆದರಿದ ಯುವತಿ ರಕ್ಷಣೆಗಾಗಿ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಸಂಚಾರ ಪೊಲೀಸರು ಮತ್ತು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ನಂತರ ಸಂತ್ರಸ್ತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಹಾಗೂ ಬುಕಿಂಗ್ ವಿವರಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಂಜುನಾಥ ನಗರದ ನಿವಾಸಿಯಾದ ಆರೋಪಿ ರೋಹಿತ್‌ನನ್ನು ಮನೆಯಿಂದಲೇ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
