ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಿಂದ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಸರಳುಗಳು ಕಳ್ಳತನವಾಗಿವೆ.
ಅಕ್ಷಯ ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿಮಾನ ನಿಲ್ದಾಣದ ‘ಕ್ರಾಸ್ ಫೀಲ್ಡ್ ಟ್ಯಾಕ್ಸಿವೇ’ ಯೋಜನೆಯ ಕಾಮಗಾರಿ ನಡೆಯುತ್ತಿತ್ತು. ಈ ಕಂಪನಿಯ ಅಜಯ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಮಾರ್ಚ್ 25 ರಂದು ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾಲ್ವರು ಶಂಕಿತರನ್ನು ಗುರುತಿಸಿರುವ ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ.
ಅಧಿಕಾರಿಗಳ ಗಮನಕ್ಕೆ ಬಂದ ನಂತರ ಹಿಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಮಾರ್ಚ್ 13 ರಂದು ಪ್ರಾಜೆಕ್ಟ್ ಯಾರ್ಡ್‌ನಿಂದ ಮೊದಲ ಬಾರಿಗೆ 24 ಲಕ್ಷ ರೂಪಾಯಿ ಮೌಲ್ಯದ ಟಿಎಂಟಿ ಸ್ಟೀಲ್ ಬಾರ್‌ಗಳು ನಾಪತ್ತೆಯಾಗಿದ್ದವು. ಮಾರ್ಚ್ 2 ರಂದೇ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಸರಳುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಉಮೇಶ್ ಪ್ರಜಾಪತಿ, ಶಿವಂ ಕುಮಾರ್, ಅಜಯ್ ಕುಮಾರ್ ಮಿಶ್ರಾ ಮತ್ತು ಅರುಣ್ ಕುಮಾರ್ ಎಂಬುವವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕೆಎ-53-ಎಸಿ-3347 ನೋಂದಣಿ ಸಂಖ್ಯೆಯ ವಾಹನದ ಮೇಲೆ ಬಾರ್‌ಗಳನ್ನು ಲೋಡ್ ಮಾಡಿರುವುದು ಕಂಡುಬಂದಿದೆ. ನಾಲ್ವರು ಶಂಕಿತ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
