ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಾಗೂ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎರಡನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. 42ನೇ ಎಸಿಜೆಎಂ (ACJM) ಕೋರ್ಟ್ ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅವರು ಈ ಆದೇಶ ಹೊರಡಿಸಿದ್ದು, ಇಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಈ ಹಿಂದೆ ಸಮನ್ಸ್ ಜಾರಿ ಮಾಡಿದ ಬಗ್ಗೆ ಪೊಲೀಸರು ನೀಡಿದ್ದ ಮಾಹಿತಿಯನ್ನು ಒಪ್ಪದ ನ್ಯಾಯಾಲಯ, ಇದೀಗ ಮತ್ತೊಮ್ಮೆ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದೆ. 2025ರ ಅಕ್ಟೋಬರ್ 14ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದ್ದರು. ಅದೇ ರೀತಿ ಮೊಹಮ್ಮದ್ ನಲಪಾಡ್ ಅವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂಘದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಹೇಳಿಕೆಗಳು ಹಾಗೂ ಪೋಸ್ಟ್‌ಗಳಿಂದ ಆರ್ಎಸ್ಎಸ್ ಸಂಘಟನೆಯ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಬೆಂಗಳೂರಿನ ಸಿದ್ದಾಪುರ ನಿವಾಸಿಯಾಗಿರುವ ಆರ್ಎಸ್ಎಸ್ ಕಾರ್ಯಕರ್ತ ತೇಜಸ್ ಗೌಡ ಅವರು ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಇದೀಗ ಕೋರ್ಟ್ ಖುದ್ದು ಹಾಜರಾತಿಗೆ ಸೂಚಿಸಿದ್ದು, ಸಚಿವರು ಹಾಗೂ ನಲಪಾಡ್ ಅವರು ಇಂದು ವಿಚಾರಣೆಗೆ ಹಾಜರಾಗಲಿದ್ದಾರೆಯೇ ಕಾದು ನೋಡಬೇಕಿದೆ.
