ಬಳ್ಳಾರಿ/ಸಂಡೂರು: 2011ರ ಅಕ್ರಮ ಗಣಿಗಾರಿಕೆಯ ಕರಾಳ ಯುಗ ಅಂತ್ಯವಾಯಿತು ಎಂದುಕೊಂಡಿದ್ದ ಜನತೆಗೆ ಈಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕೇಂದ್ರ ಉಕ್ಕು ಸಚಿವಾಲಯದ ಒಡೆತನದ, ಮಹಾರತ್ನ ಕಂಪನಿ ಎಂದೇ ಖ್ಯಾತಿಯಾದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) ದಲ್ಲಿಯೇ ಅಕ್ರಮ ಅದಿರು ಸಾಗಾಟದ ಬೃಹತ್ ಜಾಲ ಪತ್ತೆಯಾಗಿದೆ.
ಏನಿದು ಪ್ರಕರಣ?
ಕಳೆದ ಜನವರಿ 16ರಂದು ಸಂಡೂರಿನ ಬಾಬಯ್ಯ ಕ್ರಾಸ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ಯಾವುದೇ ಪರವಾನಗಿ ಇಲ್ಲದೆ ಸಾಗುತ್ತಿದ್ದ 20 ಟನ್ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರು ತುಂಬಿದ ಲಾರಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಕೇವಲ ಒಂದು ಲಾರಿಯ ಕಳ್ಳತನ ಎನ್ನಲಾಗಿತ್ತು, ಆದರೆ ತನಿಖೆ ಮುಂದುವರಿದಂತೆ ಇದು ಸಾವಿರಾರು ಟನ್‌ಗಳ ಹಗರಣ ಎಂಬುದು ಬಯಲಾಗಿದೆ.
ತನಿಖೆಯಲ್ಲಿ ಬಯಲಾದ ಪ್ರಮುಖ ಅಂಶಗಳು
ಸಂಡೂರಿನ NMDC ಗಣಿ ಸಂಖ್ಯೆ 1111ರ ‘ಸಿ’ ಬ್ಲಾಕ್‌ನಿಂದ ಈ ಅದಿರು ಕಳ್ಳಸಾಗಣೆಯಾಗಿದೆ. ಸಂಡೂರು ಪೊಲೀಸರು ತನಿಖೆ ನಡೆಸಿದಾಗ ಬಳ್ಳಾರಿ ತಾಲೂಕಿನ ಎರಡು ಪ್ರಮುಖ ಸ್ಪಾಂಜ್ ಕಬ್ಬಿಣದ ಕಾರ್ಖಾನೆಗಳಿಗೆ ಅಕ್ರಮವಾಗಿ ಅದಿರು ಸರಬರಾಜಾಗಿರುವುದು ಕಂಡುಬಂದಿದೆ. ಸದ್ಯ ಪೊಲೀಸರು ಈ ಕಾರ್ಖಾನೆಗಳಿಂದ ಸುಮಾರು 2500 ಮೆಟ್ರಿಕ್ ಟನ್ ಅದಿರನ್ನು ಜಪ್ತಿ ಮಾಡಿದ್ದಾರೆ. ಲಾರಿ ಚಾಲಕ ತಿಪ್ಪೇಸ್ವಾಮಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಈತನ ವಿಚಾರಣೆಯ ಆಧಾರದ ಮೇಲೆ ಐದಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕರು ಮತ್ತು ಕಾರ್ಖಾನೆಗಳ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ‘ಕಿಂಗ್‌ಪಿನ್’ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಭದ್ರತಾ ವೈಫಲ್ಯದ ಪ್ರಶ್ನೆ
NMDC ಗಣಿಯಲ್ಲಿ CISF (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಭದ್ರತೆ ಇದ್ದರೂ, ಜಿಪಿಎಸ್ ಅಳವಡಿಕೆಯ ನಿಯಮಗಳಿದ್ದರೂ ಸಹ ಇಷ್ಟು ದೊಡ್ಡ ಪ್ರಮಾಣದ ಅದಿರು ಕಣ್ಣು ತಪ್ಪಿಸಿ ಸಾಗಾಟವಾಗಿದ್ದು ಹೇಗೆ? ಎಂಬ ಪ್ರಶ್ನೆ ಈಗ ಗಣಿ ಇಲಾಖೆ ಮತ್ತು ಪೊಲೀಸರನ್ನು ಕಾಡುತ್ತಿದೆ. ಸದ್ಯ ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಗಣಿಗಾರಿಕೆಯ ಭೂತ ಎದ್ದಂತಾಗಿದ್ದು, ಸಂಡೂರು ಪೊಲೀಸರ ತನಿಖೆ ಮುಂದುವರಿದಿದೆ.
