ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ನಿನ್ನೆ ನಡೆದ ಆನೆಗಳ ಕಾದಾಟ (Elephant clash) ಪ್ರಕರಣ ಭಾರಿ ದುರಂತದಲ್ಲಿ ಅಂತ್ಯಕಂಡಿದೆ. ನಿನ್ನೆ ಕಾವೇರಿ ನದಿಯಲ್ಲಿ ನಡೆದ ಕಾಳಗದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದೀಗ ಅದೇ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ (Marthanda) ಎಂಬ ಆನೆಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
‘ಕಂಜನ್’ (Kanjan) ಎಂಬ ಆನೆಯು ರೊಚ್ಚಿಗೆದ್ದು ಹೊಡೆದ ಏಟಿಗೆ ಸಿಲುಕಿ ಸುಮಾರು 35 ವರ್ಷದ ಗಂಡಾನೆ ಮಾರ್ತಾಂಡ ತೀವ್ರವಾಗಿ ಗಾಯಗೊಂಡಿತ್ತು. ಕಂಜನ್ ಆನೆಯ ದಂತದೇಟಿನಿಂದ ಮಾರ್ತಾಂಡನ ಹೊಟ್ಟೆ ಹಾಗೂ ಕಿವಿ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಶಿಬಿರದಲ್ಲೇ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಗಾಯದ ತೀವ್ರತೆಗೆ ಮಾರ್ತಾಂಡ ಮೃತಪಟ್ಟಿದೆ. ಸದ್ಯ ವೈದ್ಯರು ಆನೆಯ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.
ದಸರಾ ಗಜಪಡೆಯಿಂದ ಕಂಜನ್‌ಗೆ ಕೊಕ್
ನಿನ್ನೆ ನಡೆದ ದುಬಾರೆ ಆನೆ ಕಾಳಗದಲ್ಲಿ ಕಂಜನ್ ಆನೆಯು ಹದ್ದುಮೀರಿ ವರ್ತಿಸಿತ್ತು. ಇದೀಗ ಕಂಜನ್ ದಾಳಿಯಿಂದಲೇ ಮತ್ತೊಂದು ಸಾಕಾನೆ ಮಾರ್ತಾಂಡ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ರಾಜ್ಯ ಅರಣ್ಯ ಇಲಾಖೆ (Forest Department) ಕಠಿಣ ನಿರ್ಧಾರ ಕೈಗೊಂಡಿದೆ.
ಕಂಜನ್ ಆನೆಯನ್ನು ಇನ್ನು ಮುಂದೆ ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಬಳಸದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Forest Minister Eshwar Khandre) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆತನನ್ನು ಗಜಪಡೆಯ ಸದಸ್ಯನನ್ನಾಗಿ ಪರಿಗಣಿಸದಂತೆ ಆದೇಶಿಸಲಾಗಿದೆ.
ಗಮನಾರ್ಹವೆಂದರೆ, ಈ ಕಂಜನ್ ಆನೆಯು ಕಳೆದ ಮೂರು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. ಇದೀಗ ತನ್ನ ಆಕ್ರಮಣಕಾರಿ ವರ್ತನೆಯಿಂದ ದಸರಾ ಗಜಪಡೆಯಿಂದ ಶಾಶ್ವತವಾಗಿ ದೂರವಾಗಿದೆ.
