S Shorts

Shesha 2016 : ಮಾರ್ಚ್ 6ಕ್ಕೆ ಬಿಡುಗಡೆಯಾಗಲಿದೆ ಪೊಲೀಸ್ ಕಥಾನಕ ‘ಶೇಷ 2016’

Shesha 2016 : ಮಾರ್ಚ್ 6ಕ್ಕೆ ಬಿಡುಗಡೆಯಾಗಲಿದೆ ಪೊಲೀಸ್ ಕಥಾನಕ ‘ಶೇಷ 2016’
Author: Kalanvitha Jain
Posted By: Kalanvitha Jain
Updated: Feb 13, 2026 | 3:44 PM

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಕಥೆಗಳಿಗೆ ಯಾವತ್ತೂ ಒಂದು ವಿಶೇಷವಾದ ಬೇಡಿಕೆಯಿದೆ. ಈಗ ಅದೇ ಸಾಲಿಗೆ ಸೇರ್ಪಡೆಗೊಳ್ಳಲುಶೇಷ 2016′ ಎಂಬ ಕುತೂಹಲಕಾರಿ ಸಿನಿಮಾ ಸಜ್ಜಾಗಿದೆ. ಪ್ರಮೋದ್ ಶೆಟ್ಟಿ, ಜಾನ್ ಕೈಪ್ಪಲ್ಲಿ ಹಾಗೂ ಅರ್ಚನಾ ಕೊಟ್ಟಿಗೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು ಇದೇ ಮಾರ್ಚ್ 06ರಂದು ಬೆಳ್ಳಿಪರದೆಗೆ ಬರಲಿದ್ದು, ಬಿಡುಗಡೆಗೂ ಮುನ್ನವೇ ಚಿತ್ರತಂಡ ಒಂದು ದೊಡ್ಡ ಸಾಧನೆ ಮಾಡಿದೆ. ಈ ಚಿತ್ರದ ಡಿಜಿಟಲ್ (OTT) ಹಕ್ಕುಗಳನ್ನು ಖ್ಯಾತ ಸಂಸ್ಥೆಯಾದ ಅಮೆಜಾನ್ ಪ್ರೈಮ್ ವಿಡಿಯೋ ಭಾರಿ ಮೊತ್ತಕ್ಕೆ ಖರೀದಿಸಿದೆ.

ಪೊಲೀಸ್ ಇಲಾಖೆಯ ಸಂಘರ್ಷದ ಕಥೆ

ಇತ್ತೀಚೆಗೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿರುವ ‘ಉತ್ಸವ ಲೆಗಸಿ’ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಯಿತು. ಪೊಲೀಸ್ ಇಲಾಖೆಯ ಎಸಿಪಿ ಗಣೇಶ್ ಹಾಗೂ ಮೋಹನ್ ಕುಮಾರ್ ದಾನಪ್ಪ ಪೋಸ್ಟರ್ ಲಾಂಚ್ ಮಾಡಿದರು.

ನಿರ್ದೇಶಕ ಪ್ರದೀಪ್ ಅರಸೀಕೆರೆ ಅವರ ಚೊಚ್ಚಲ ಪ್ರಯತ್ನ

ಹಿಂದೆ ಕೆ.ಇ.ಬಿ ಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಅರಸೀಕೆರೆ, ಸಿನಿಮಾ ಮೇಲಿನ ಅಪಾರ ಆಸಕ್ತಿಯಿಂದ ಕೆಲಸ ಬಿಟ್ಟು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. “ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷದ ನಂತರ ಉಳಿಯುವುದೇ ‘ಶೇಷ’. 2016ರ ಕಾಲಘಟ್ಟದಲ್ಲಿ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳನ್ನು ಈ ಸಿನಿಮಾ ಒಳಗೊಂಡಿದೆ. ಸಮಾಜದಲ್ಲಿ ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆ ಇದೆ, ಆದರೆ ಪೊಲೀಸ್ ಇಲಾಖೆಗೆ ಪರ್ಯಾಯವಿಲ್ಲ. ಅಲ್ಲಿನ ಭ್ರಷ್ಟಾಚಾರ ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದೇ ಚಿತ್ರದ ಸಾರಾಂಶ,” ಎಂದು ನಿರ್ದೇಶಕರು ವಿವರಿಸಿದರು.

ನಟ ಪ್ರಮೋದ್ ಶೆಟ್ಟಿ ಮಾತನಾಡುತ್ತಾ, “ಇದು ಕೇವಲ ಪೊಲೀಸ್ ಸ್ಟೇಷನ್ ಸುತ್ತ ನಡೆಯುವ ಕಥೆಯಲ್ಲ, ಪ್ರೇಕ್ಷಕರಿಗೆ ‘ಬೆಲ್ ಬಾಟಮ್’ ಚಿತ್ರದಂತಹ ಕುತೂಹಲಕಾರಿ ಅನುಭವ ನೀಡಲಿದೆ,” ಎಂದರು. ಚಿತ್ರವು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಹೈದರಾಬಾದ್ ಮೂಲದ ಡಾ. ರಾಜೀವ್ ಹಾಗೂ ಕ್ರಾಂತಿ ಪ್ರಸಾದ್ ಈ ಚಿತ್ರದ ಒಟಿಟಿ ವ್ಯವಹಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಒಟ್ಟಾರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತು ಪೊಲೀಸ್ ವ್ಯವಸ್ಥೆಯ ಒಳನೋಟಗಳನ್ನು ಹೊಂದಿರುವ ‘ಶೇಷ 2016’ ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.