ಬೆಂಗಳೂರು: ವಿಧಾನಸೌಧದಲ್ಲಿ ಪ್ರತಿಪಕ್ಷಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಕುರಿತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಧಿವೇಶನವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸದಸ್ಯರ ಪ್ರತಿಭಟನೆಗೆ ಪೂರಕವಾಗಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಪ್ರತಿಪಕ್ಷದ ಸದಸ್ಯರು ನಿನ್ನೆ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸದನದಲ್ಲಿ ಅವರಿಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ವಿಧಾನಸಭಾ ಕಾರ್ಯಾಲಯದಿಂದ ಒದಗಿಸಲಾಗಿದೆ” ಎಂದು ಸ್ಪೀಕರ್ ತಿಳಿಸಿದರು. ಈ ಬಾರಿಯ ಅಧಿವೇಶನವು ಬಹಳ ಚೆನ್ನಾಗಿ ನಡೆದಿದೆ. ಸದಸ್ಯರು ಅನೇಕ ಜನಪರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಷ್ಟು ದಿನದ ಅವಧಿಯಲ್ಲಿ ಏನೆಲ್ಲಾ ಚರ್ಚೆ ಆಗಿದೆ ಎಂಬ ಸಮಗ್ರ ವಿವರವನ್ನು ಶೀಘ್ರವೇ ನೀಡಲಾಗುವುದು ಎಂದು ಅವರು ಹೇಳಿದರು.
“ಯಾವುದೇ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಣ್ಣಪುಟ್ಟ ಗದ್ದಲಗಳು, ವಾಗ್ವಾದಗಳು ಇರುವುದು ಸಹಜ. ಇದು ಪ್ರಜಾಪ್ರಭುತ್ವದ ಒಂದು ಭಾಗ” ಎಂದು ಅವರು ಅಭಿಪ್ರಾಯಪಟ್ಟರು. ಅಧಿವೇಶನ ಸುಗಮವಾಗಿ ನಡೆದಿದ್ದರೂ, ಇನ್ನು ಮುಂದೆ ಇದನ್ನು ಇನ್ನಷ್ಟು ಉತ್ತಮವಾಗಿ ಮತ್ತು ಅರ್ಥಪೂರ್ಣವಾಗಿ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
