S Shorts

ಸ್ಟಿಂಗ್ ಆಪರೇಷನ್: ವಿಡಿಯೋ ಅಪ್‌ಲೋಡ್‌ಗೆಂದೇ ಹೊಸ ಯೂಟ್ಯೂಬ್ ಚಾನೆಲ್, 54 ಸಬ್‌ಸ್ಕ್ರೈಬರ್‌ಗಳ ವಿಚಾರಣೆಗೆ Cyber ಪೊಲೀಸರ ಸಿದ್ಧತೆ!

ಸ್ಟಿಂಗ್ ಆಪರೇಷನ್: ವಿಡಿಯೋ ಅಪ್‌ಲೋಡ್‌ಗೆಂದೇ ಹೊಸ ಯೂಟ್ಯೂಬ್ ಚಾನೆಲ್, 54 ಸಬ್‌ಸ್ಕ್ರೈಬರ್‌ಗಳ ವಿಚಾರಣೆಗೆ Cyber ಪೊಲೀಸರ ಸಿದ್ಧತೆ!
Author: Sagaradventure
Posted By: Sagaradventure
Updated: Oct 16, 2026 | 3:14 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಕಥಿತ ‘ಸ್ಟಿಂಗ್ ಆಪರೇಷನ್’ (Sting Operation) ಪ್ರಕರಣದ ತನಿಖೆಯನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಚುರುಕುಗೊಳಿಸಿದ್ದಾರೆ. ವಿಡಿಯೋಗಳನ್ನು ವೈರಲ್ ಮಾಡುವ ದುರುದ್ದೇಶದಿಂದಲೇ ಹೊಸ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆಯಲಾಗಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ವಿಡಿಯೋ ಅಪ್‌ಲೋಡ್‌ಗಾಗಿಯೇ ‘ಕರ್ನಾಟಕ ಹನಿಟ್ರ್ಯಾಪ್’: 

ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್‌ಲೋಡ್ ಮಾಡಲೆಂದೇ ‘ಕರ್ನಾಟಕ ಹನಿಟ್ರ್ಯಾಪ್’ (Karnataka Honeytrap) ಎಂಬ ಹೆಸರಿನಲ್ಲಿ ಕಿಡಿಗೇಡಿಗಳು ಹೊಸ ಯೂಟ್ಯೂಬ್ ಚಾನೆಲ್ ಸೃಷ್ಟಿಸಿದ್ದರು ಎಂಬುದು ಸೈಬರ್ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಚಾನೆಲ್ ಆರಂಭಿಸಿದ ಬೆನ್ನಲ್ಲೇ ನಾಲ್ಕು ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ವಿಶೇಷವೆಂದರೆ, ಚಾನೆಲ್ ತೆರೆದ ಕೆಲವೇ ಕ್ಷಣಗಳಲ್ಲಿ ಬರೋಬ್ಬರಿ 54 ಜನರು ಈ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿದ್ದರು ಎನ್ನುವ ಅಂಶ ಪೊಲೀಸರ ಗಮನಕ್ಕೆ ಬಂದಿದೆ.

54 ಸಬ್‌ಸ್ಕ್ರೈಬರ್‌ಗಳ ವಿಚಾರಣೆಗೆ ಬುಲಾವ್: 

ಈ ಕ್ಷಿಪ್ರ ಬೆಳವಣಿಗೆಯ ಹಿನ್ನೆಲೆಯಲ್ಲಿ ಅನುಮಾನಗೊಂಡಿರುವ ಸೈಬರ್ ಕ್ರೈಂ ಪೊಲೀಸರು, ಆ 54 ಸಬ್‌ಸ್ಕ್ರೈಬರ್‌ಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ವೀಕ್ಷಿಸಲು ಅಥವಾ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಲು ಮುಂಚಿತವಾಗಿಯೇ ಯಾರಾದರೂ ಸೂಚನೆ ನೀಡಿದ್ದರೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲರ ಹಿನ್ನೆಲೆಯನ್ನು ಪರಿಶೀಲಿಸುತ್ತಿರುವ ಪೊಲೀಸರು, ಅಗತ್ಯವಿರುವವರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದು, ಇಂದು ಕೂಡ ಹಲವರ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಮಾಸ್ಟರ್‌ಮೈಂಡ್ ಪತ್ತೆಗೆ ತೀವ್ರ ಶೋಧ: 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 15 ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ಟೋಬರ್ 6ರಂದೇ ಪ್ರಕರಣ ದಾಖಲಾಗಿದ್ದರೂ, ಈ ಷಡ್ಯಂತ್ರದ ಹಿಂದಿರುವ ‘ಮಾಸ್ಟರ್‌ಮೈಂಡ್’ ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಚಾನೆಲ್ ಆರಂಭಿಸಿದವರು ಯಾರು, ವಿಡಿಯೋ ಅಪ್‌ಲೋಡ್ ಮಾಡಿದವರು ಯಾರು ಹಾಗೂ ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರ ತನಿಖೆ ಮುಂದುವರಿದಿದೆ.