ಸಾಮಾಜಿಕ ಜಾಲತಾಣಗಳಲ್ಲಿ (Social Media) ಬೇಕಾಬಿಟ್ಟಿ ಅಶ್ಲೀಲ ಹಾಗೂ ನಿಂದನಾತ್ಮಕ ಕಾಮೆಂಟ್‌ಗಳನ್ನು ಮಾಡುವ ವಿಕೃತ ಮನಸ್ಸುಗಳಿಗೆ ತಡೆಹಾಕಲು ಇದೀಗ ಅತ್ಯಂತ ಕಠಿಣ ಕಾನೂನು ಜಾರಿಗೆ ಬಂದಿದೆ. ಸುಳ್ಳು ಖಾತೆಗಳ ಹಿಂದೆ ಅಡಗಿ ಕುಳಿತು ಮಹಿಳೆಯರು, ಸೆಲೆಬ್ರಿಟಿಗಳು ಹಾಗೂ ಸಾರ್ವಜನಿಕರ ತೇಜೋವಧೆ ಮಾಡುವ ಕಾಮೆಂಟ್ ಶೂರರಿಗೆ ಹೊಸ ಐಟಿ ಕಾಯ್ದೆಗಳು (IT Laws) ಸಿಂಹಸ್ವಪ್ನವಾಗಿ ಪರಿಣಮಿಸಿವೆ.
ಹೊಸ ಕಾಯ್ದೆಯ ಕಠಿಣ ನಿಯಮಗಳು: ಜುಲೈ 1, 2024 ರಿಂದಲೇ ಈ ನೂತನ ಹಾಗೂ ಕಠಿಣ ಐಟಿ ಕಾಯ್ದೆಗಳು ಜಾರಿಗೆ ಬಂದಿವೆ. ಇದರ ಅನ್ವಯ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮಾಡಿದರೆ ಕಠಿಣ ಶಿಕ್ಷೆ ಗ್ಯಾರಂಟಿ.
ಜೈಲು ಶಿಕ್ಷೆ ಹಾಗೂ ಜಾಮೀನು ರಹಿತ: ಅಶ್ಲೀಲ ಅಥವಾ ನಿಂದನಾತ್ಮಕ ಕಾಮೆಂಟ್ ಮಾಡಿದರೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ಕಠಿಣ ಕಾಯ್ದೆಯಾಗಿದ್ದು, 1 ವರ್ಷದವರೆಗೂ ಆರೋಪಿಗೆ ಜಾಮೀನು (Bail) ಸಿಗುವುದಿಲ್ಲ. ಸೆಷನ್ಸ್ ಕೋರ್ಟ್ ಅಥವಾ ಹೈಕೋರ್ಟ್ ಮೆಟ್ಟಿಲೇರಿದರೂ ಜಾಮೀನು ಮಂಜೂರಾಗದಂತಹ ಕಟ್ಟುನಿಟ್ಟಿನ ನಿಯಮ ಇದಾಗಿದೆ.
ಕನಿಷ್ಠ 3 ವರ್ಷ ಶಿಕ್ಷೆ ಹಾಗೂ ದಂಡ: ಕಾಯ್ದೆಯ 2 ನಿರ್ದಿಷ್ಟ ಸೆಕ್ಷನ್‌ಗಳ ಅಡಿ ಆರೋಪ ಸಾಬೀತಾದರೆ, ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ದಂಡ ಕಟ್ಟದಿದ್ದರೆ ಬಿಡುಗಡೆ ಇಲ್ಲ: ಒಂದು ವೇಳೆ ಕೋರ್ಟ್ ವಿಧಿಸಿದ 1 ಲಕ್ಷ ರೂ. ದಂಡವನ್ನು ಪಾವತಿಸಲು ವಿಫಲವಾದರೆ, ಆ ದಂಡದ ಮೊತ್ತವನ್ನು ಪಾವತಿಸುವವರೆಗೂ ಜೈಲು ಶಿಕ್ಷೆ ಕಡ್ಡಾಯವಾಗಿ ಮುಂದುವರೆಯಲಿದೆ.
ಸೆಲೆಬ್ರಿಟಿಗಳಿಗೆ ಕಿರುಕುಳ ಹಾಗೂ ಕಾಯ್ದೆಯ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಟ-ನಟಿಯರು ಹಾಗೂ ಅವರ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡು ಅತ್ಯಂತ ಕೆಳಮಟ್ಟದ ಕಾಮೆಂಟ್‌ಗಳನ್ನು ಮಾಡಲಾಗುತ್ತಿತ್ತು. ನಟಿ ರಮ್ಯಾ, ನಟಿ ರುಕ್ಮಿಣಿ ವಸಂತ್ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಪೋಸ್ಟ್‌ಗಳಿಗೆ ಸೈಬರ್ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿ ವಿಕೃತಿ ಮೆರೆದಿದ್ದರು. ಇಂತಹ ಪ್ರಕರಣಗಳು ಮಿತಿಮೀರಿದ ಹಿನ್ನೆಲೆಯಲ್ಲಿ, ಸೈಬರ್ ಅಪರಾಧಿಗಳಿಗೆ ಬಿಸಿ ಮುಟ್ಟಿಸಲು ಈ ಕಠಿಣ ಕಾನೂನು ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ.
