ಬಳ್ಳಾರಿ: ಬ್ಯಾನರ್ ಗಲಭೆ ಪ್ರಕರಣದಿಂದಾಗಿ ಬೂದಿ ಮುಚ್ಚಿದ ಕೆಂಡದಂತಿರುವ ಬಳ್ಳಾರಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಸುಮನ್ ಪೆನ್ನೇಕರ್ (Suman Pennekar) ಅವರು ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರಿಂದ ಡಾ.ಸುಮನ್ ಪೆನ್ನೇಕರ್ ಅವರು ಅಧಿಕಾರ ಹಸ್ತಾಂತರ ಪಡೆದರು.
ಘಟನೆಯ ಹಿನ್ನೆಲೆ:
ಬ್ಯಾನರ್ ವಿಚಾರವಾಗಿ ನಡೆದ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲರಾದ ಆರೋಪದ ಮೇಲೆ, ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಈ ಹಿಂದಿನ ಎಸ್ಪಿಯವರನ್ನು ಸರ್ಕಾರ ಅಮಾನತುಗೊಳಿಸಿ (Suspension) ಆದೇಶ ಹೊರಡಿಸಿತ್ತು. ಹೀಗಾಗಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ನೂತನ ಎಸ್ಪಿಯವರ ಮುಂದಿರುವ ಮೊದಲ ಆದ್ಯತೆಯಾಗಿದೆ.
ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಡಾ.ಸುಮನ್ ಪೆನ್ನೇಕರ್ ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಗಲಭೆ ನಡೆದ ಸಂದರ್ಭ, ಕಾರಣ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆಯುತ್ತಿದ್ದಾರೆ. ಸಭೆಯ ನಂತರ ಅವರು ಗಲಭೆ ನಡೆದ ಘಟನಾ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ.
