ಜಿಬಿಎ (GBA) ಚುನಾವಣೆಯನ್ನು ಇದೇ ವರ್ಷದ ಡಿಸೆಂಬರ್ 31ರ ಒಳಗೆ ಕಡ್ಡಾಯವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ. ಈ ಹಿಂದೆ ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ, ರಾಜ್ಯ ಸರ್ಕಾರವು ಚುನಾವಣಾ ಗಡುವು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಚುನಾವಣೆಯನ್ನು ಮತ್ತೆ ನಾಲ್ಕು ತಿಂಗಳುಗಳ ಕಾಲ ಮುಂದೂಡಲು ಸಮ್ಮತಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಆರಂಭವಾದಾಗ, ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ಹಾಜರಾಗಿ ವಾದ ಮಂಡಿಸಿದರು. ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡುವಂತೆ ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಸರ್ಕಾರದ ಮನವಿಯನ್ನು ಆಲಿಸಿದ ನ್ಯಾಯಪೀಠವು, ಡಿಸೆಂಬರ್ 31ರವರೆಗೆ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಗಡುವು ವಿಸ್ತರಣೆಯ ಜೊತೆಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದೆ. ಇದು ಚುನಾವಣೆ ನಡೆಸಲು ನೀಡಲಾಗುತ್ತಿರುವ ಅಂತಿಮ ಹಾಗೂ ಕೊನೆಯ ಅವಕಾಶವಾಗಿದೆ. ಇದರ ಬಳಿಕ ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಗಡುವು ವಿಸ್ತರಣೆ ಅಥವಾ ಹೆಚ್ಚುವರಿ ಕಾಲಾವಕಾಶವನ್ನು ನೀಡುವುದಿಲ್ಲ ಎಂದು ತ್ರಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಖಡಕ್ ಆಗಿ ಸೂಚನೆ ನೀಡಿದೆ.
