S Shorts

ಉಪವಾಸಕ್ಕೆ ಸಬ್ಬಕ್ಕಿ, ಹಬ್ಬಕ್ಕೆ ರಸಗುಲ್ಲಾ; Swiggyಯಲ್ಲಿ ದಾಖಲಾದ ಅತಿದೊಡ್ಡ ಆರ್ಡರ್ ಎಷ್ಟು ಗೊತ್ತಾ?

ಉಪವಾಸಕ್ಕೆ ಸಬ್ಬಕ್ಕಿ, ಹಬ್ಬಕ್ಕೆ ರಸಗುಲ್ಲಾ; Swiggyಯಲ್ಲಿ ದಾಖಲಾದ ಅತಿದೊಡ್ಡ ಆರ್ಡರ್ ಎಷ್ಟು ಗೊತ್ತಾ?
Author: Sagaradventure
Posted By: Sagaradventure
Updated: Oct 22, 2026 | 4:45 PM

ನವರಾತ್ರಿ, ದುರ್ಗಾ ಪೂಜೆ ಹಾಗೂ ದಸರಾ ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲೇ ಪ್ರಮುಖ ಫುಡ್ ಡೆಲಿವರಿ ಆ್ಯಪ್ ‘ಸ್ವಿಗ್ಗಿ’ (Swiggy), ಈ ಹಬ್ಬದ ಸೀಸನ್‌ನಲ್ಲಿ ಭಾರತೀಯರು ಅತಿ ಹೆಚ್ಚು ಯಾವ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂಬ ಕುತೂಹಲಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಹಬ್ಬದ ದಿನಗಳಲ್ಲಿ ಉಪವಾಸದ ಊಟ (ವ್ರತದ ಊಟ) ಮತ್ತು ಸಾಂಪ್ರದಾಯಿಕ ಸಿಹಿ ತಿನಿಸುಗಳಿಗೆ ಆನ್‌ಲೈನ್‌ನಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.

ಸಬ್ಬಕ್ಕಿ ಖಿಚಡಿ & ವಡೆ ನಂ.1: ಅಕ್ಟೋಬರ್ 17 ರಿಂದ 20ರವರೆಗಿನ ನವರಾತ್ರಿ ಅವಧಿಯಲ್ಲಿ ಉಪವಾಸದ ಊಟಕ್ಕೆ ಅತಿ ಹೆಚ್ಚು ಬೇಡಿಕೆ ಇತ್ತು. ದೇಶಾದ್ಯಂತ ಸಬ್ಬಕ್ಕಿ ತಿನಿಸುಗಳು ಅತಿ ಹೆಚ್ಚು ಆರ್ಡರ್ ಆಗಿದ್ದು, ವಿಶೇಷವಾಗಿ ‘ಸಬ್ಬಕ್ಕಿ ಖಿಚಡಿ’ ಮತ್ತು ‘ಸಬ್ಬಕ್ಕಿ ವಡೆ’ ಹಬ್ಬದ ಫೇವರಿಟ್ ಆಗಿವೆ. ಅ. 17-18ರ ವೀಕೆಂಡ್‌ನಲ್ಲಿ ಸ್ವಿಗ್ಗಿಯಲ್ಲಿ ಪ್ರತಿ ಗಂಟೆಗೆ ಸರಾಸರಿ 1,794 ಸಬ್ಬಕ್ಕಿ ತಿನಿಸುಗಳು ಡೆಲಿವರಿಯಾಗಿವೆ. ಮುಂಬೈ, ಪುಣೆ, ಜೈಪುರದ ಜೊತೆಗೆ ಬೆಂಗಳೂರಿನಲ್ಲೂ ಇವುಗಳಿಗೆ ಹೆಚ್ಚಿನ ಡಿಮ್ಯಾಂಡ್ ಇತ್ತು.

ವ್ರತದ ಥಾಲಿಗೆ ಭಾರಿ ಬೇಡಿಕೆ, ಅತಿದೊಡ್ಡ ಆರ್ಡರ್: 

ಪೂರ್ತಿ ಊಟದ ಪ್ಯಾಕೇಜ್ ಆದ ‘ನವರಾತ್ರಿ ಸ್ಪೆಷಲ್ ವ್ರತದ ಥಾಲಿ’ಗಳಿಗೆ (Vrat Thali) ಹೆಚ್ಚಿನ ಬೇಡಿಕೆ ಇತ್ತು. ದೆಹಲಿ, ಬೆಂಗಳೂರು, ಗುರ್‌ಗಾಂವ್ ಮತ್ತು ನೋಯ್ಡಾದಲ್ಲಿ ಇವು ಹೆಚ್ಚು ಮಾರಾಟವಾಗಿವೆ. ವಿಶೇಷವೆಂದರೆ, ನೋಯ್ಡಾದಲ್ಲಿ ಗ್ರಾಹಕರೊಬ್ಬರು ಒಂದೇ ಬಾರಿಗೆ 11,072 ರೂ. ಪಾವತಿಸಿ ಬರೋಬ್ಬರಿ 13 ವ್ರತದ ಥಾಲಿಗಳನ್ನು ಆರ್ಡರ್ ಮಾಡಿದ್ದಾರೆ. ಇದು ಹಬ್ಬದ ಅವಧಿಯಲ್ಲಿ ದಾಖಲಾದ ಅತಿದೊಡ್ಡ ಆರ್ಡರ್ ಆಗಿದೆ.

ಸಿಹಿ ತಿನಿಸುಗಳಲ್ಲಿ ‘ರಸಗುಲ್ಲಾ’ ಕಿಂಗ್: 

ಕಳೆದ ವರ್ಷದ ಹಬ್ಬದ ಸೀಸನ್‌ಗೆ ಹೋಲಿಸಿದರೆ ಈ ಬಾರಿ ಸಾಂಪ್ರದಾಯಿಕ ಸಿಹಿ ತಿನಿಸುಗಳ ಆರ್ಡರ್‌ಗಳಲ್ಲಿ ಶೇ. 36.4 ರಷ್ಟು ಏರಿಕೆಯಾಗಿದೆ. ಇದರಲ್ಲಿ ‘ರಸಗುಲ್ಲಾ’ (Rasgulla) ಅಗ್ರಸ್ಥಾನದಲ್ಲಿದ್ದು, ಪ್ರತಿ ಗಂಟೆಗೆ ಸರಾಸರಿ 495 ರಸಗುಲ್ಲಾ ಆರ್ಡರ್‌ಗಳನ್ನು ಸ್ವಿಗ್ಗಿ ಡೆಲಿವರಿ ಮಾಡಿದೆ. ಗುಲಾಬ್ ಜಾಮೂನ್, ಕಾಜು ಕಟ್ಲಿ, ಜಿಲೇಬಿ ಮತ್ತು ರಸಮಲಾಯಿ ಕೂಡ ಅತಿ ಹೆಚ್ಚು ಮಾರಾಟವಾಗಿವೆ. ಮುಂಬೈನ ಗ್ರಾಹಕರೊಬ್ಬರು ವಿವಿಧ ಬಗೆಯ ಮಿಠಾಯಿಗಳಿಗಾಗಿ 9,870 ರೂ. ಪಾವತಿಸಿದ್ದು ಸಿಹಿ ವಿಭಾಗದ ಅತಿ ದೊಡ್ಡ ಆರ್ಡರ್ ಆಗಿದೆ.

ಬೆಂಗಳೂರಿನಂತಹ ಮಹಾನಗರಗಳಷ್ಟೇ ಅಲ್ಲದೆ ಪಾಟ್ನಾ, ಡೆಹ್ರಾಡೂನ್, ಅಗರ್ತಲಾದಂತಹ ಸಣ್ಣ ಪಟ್ಟಣಗಳಲ್ಲೂ ಆನ್‌ಲೈನ್ ಮೂಲಕ ಸಿಹಿ ಆರ್ಡರ್ ಮಾಡುವ ಟ್ರೆಂಡ್ ಹೆಚ್ಚಾಗಿರುವುದು ಗಮನಾರ್ಹವಾಗಿದೆ.