S Shorts

ಗಣೇಶ Biryani ತಯಾರಿಸುತ್ತಿರುವಂತೆ ವಿವಾದಾತ್ಮಕ ಜಾಹೀರಾತು, ಹಿಂದೂಗಳ ಭಾವನೆಗೆ ಧಕ್ಕೆ: ಅಂಗಡಿ ಮಾಲೀಕನ ಬಂಧನ

ಗಣೇಶ Biryani ತಯಾರಿಸುತ್ತಿರುವಂತೆ ವಿವಾದಾತ್ಮಕ ಜಾಹೀರಾತು, ಹಿಂದೂಗಳ ಭಾವನೆಗೆ ಧಕ್ಕೆ: ಅಂಗಡಿ ಮಾಲೀಕನ ಬಂಧನ
Author: Sagaradventure
Posted By: Sagaradventure
Updated: Sep 16, 2026 | 12:37 PM

ಗಣೇಶೋತ್ಸವದ ಸಂಭ್ರಮ ದೇಶಾದ್ಯಂತ ಜೋರಾಗಿರುವ ಹೊತ್ತಲ್ಲೇ, ತಮಿಳುನಾಡಿನ ಬಿರಿಯಾನಿ ಅಂಗಡಿಯೊಂದರ ವಿವಾದಾತ್ಮಕ ಜಾಹೀರಾತು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಮೋದಕ ಪ್ರಿಯನಾದ ವಿಘ್ನನಿವಾರಕನ ಕೈಯಲ್ಲಿ ಬಿರಿಯಾನಿ ಅಡುಗೆ ಮಾಡುತ್ತಿರುವಂತೆ ಚಿತ್ರಿಸಿ ಬ್ಯಾನರ್ ಹಾಕಿದ್ದಕ್ಕಾಗಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುನೆಲ್ವೇಲಿಯಲ್ಲಿರುವ ಬಿರಿಯಾನಿ ಅಂಗಡಿಯೊಂದರ ಮುಂದೆ ಅಳವಡಿಸಲಾಗಿದ್ದ ಜಾಹೀರಾತು ಬ್ಯಾನರ್‌ನಲ್ಲಿ ‘ಅರೇಬಿಕ್ ಸ್ಟೈಲ್ 65 ಬಿರಿಯಾನಿ – ರೂ.99’ ಎಂದು ಬರೆಯಲಾಗಿತ್ತು. ಇದರ ಜೊತೆಗೆ ಗಣೇಶನು ಬಿರಿಯಾನಿ ಸಿದ್ಧಪಡಿಸುತ್ತಿರುವಂತೆ ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿತ್ತು. 

ಹಬ್ಬದ ಸಂದರ್ಭದಲ್ಲಿ ಈ ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಆರೋಪಿಸಿ ಸೆಲ್ವರಾಜ್ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು 30 ವರ್ಷದ ಅಂಗಡಿ ಮಾಲೀಕ ಜಯಂತ್ ಎಂಬಾತನನ್ನು ಬಂಧಿಸಿದ್ದಾರೆ.

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ವಾತಾವರಣ ಇರುವಾಗ ಉದ್ದೇಶಪೂರ್ವಕವಾಗಿ ಇಂತಹ ಅವಮಾನಕರ ಬ್ಯಾನರ್ ಪ್ರದರ್ಶಿಸಿರುವುದು ಸ್ಥಳೀಯವಾಗಿ ಭಾರೀ ಉದ್ವಿಗ್ನತೆ ಹಾಗೂ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಈ ಆಕ್ಷೇಪಾರ್ಹ ಬ್ಯಾನರ್ ಅನ್ನು ನಿಖರವಾಗಿ ಯಾರು ವಿನ್ಯಾಸಗೊಳಿಸಿದ್ದು ಮತ್ತು ಇದನ್ನು ಯಾವಾಗ ಅಂಗಡಿಯ ಮುಂದೆ ಅಳವಡಿಸಲಾಗಿತ್ತು ಎಂಬ ಬಗ್ಗೆ ಸಮಗ್ರ ತನಿಖೆಯನ್ನು ಚುರುಕುಗೊಳಿಸಿದ್ದಾರೆ.