ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಚ್‌ಎಸ್‌ಆರ್ ಲೇಔಟ್‌ನ ವಾರ್ಡ್-174ರಲ್ಲಿ ಬರೋಬ್ಬರಿ 13,000ಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. ಜುಲೈ 20ರಂದು ಚುನಾವಣಾ ಅಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಇದು ನಾಗರಿಕರ ಮತದಾನದ ಹಕ್ಕಿನ ಮೇಲಿನ ಆಕ್ರಮಣ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು ವರದಿ ಆಧಾರದ ಮೇಲೆ ಹೆಸರುಗಳ ಡಿಲೀಟ್
ಯಾವುದೇ ಭೌತಿಕ ತನಿಖೆ ನಡೆಸದೆ ಹಾಗೂ ಬಿಎಲ್‌ಎ-2 ಏಜೆಂಟರಿಗೆ ಮಾಹಿತಿಯನ್ನೂ ನೀಡದೆ ಅಧಿಕಾರಿಗಳು ಏಕಾಏಕಿ 13 ಸಾವಿರಕ್ಕೂ ಹೆಚ್ಚು ಅರ್ಹ ಮತದಾರರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ (UEF – Permanent Shifting) ಎಂದು ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಮತದಾರರ ಮನೆಗಳಿಗೆ ಭೇಟಿ ನೀಡದೆ, ಜಿಪಿಎಸ್ ಆಧಾರಿತ ಫೋಟೋ ಸಾಕ್ಷ್ಯಗಳನ್ನು ಸಂಗ್ರಹಿಸದೆ ಹಾಗೂ ಮನೆಗಳಿಗೆ ಅಂಟಿಸಬೇಕಿದ್ದ ಎನ್ಯುಮರೇಷನ್ ಸ್ಟಿಕ್ಕರ್‌ಗಳನ್ನು ಬಳಸದೆ ಎಲ್ಲೋ ಕುಳಿತ ಅಧಿಕಾರಿಗಳು ಸುಳ್ಳು ವರದಿ ಸಿದ್ಧಪಡಿಸಿದ್ದಾರೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.
ಉನ್ನತ ಮಟ್ಟದ ತನಿಖೆ, ಅಧಿಕಾರಿಗಳ ಅಮಾನತಿಗೆ ಆಗ್ರಹ
ಮನೆ ಬಾಗಿಲಿಗೆ ಹೋಗದೆ ಸುಳ್ಳು ವರದಿ ನೀಡಿರುವುದು ಕೇವಲ ಅಧಿಕಾರಿಗಳ ಬೇಜವಾಬ್ದಾರಿಯಲ್ಲ, ಬದಲಾಗಿ ಇದು ಅಧಿಕಾರದಲ್ಲಿದ್ದವರ ಕುಮ್ಮಕ್ಕಿನಿಂದ ನಡೆದ ಬೃಹತ್ ಚುನಾವಣಾ ಅಕ್ರಮವಾಗಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಈ ಅಕ್ರಮದ ಹಿಂದೆ ಇರುವ ಪ್ರಭಾವಿ ಶಕ್ತಿಗಳ ವಿರುದ್ಧ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಸುಳ್ಳು ವರದಿ ನೀಡಿದ ಸಂಬಂಧಪಟ್ಟ ಬಿಎಲ್‌ಒ (BLO) ಸೇರಿದಂತೆ ಇತರೆ ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮರು-ಪರಿಶೀಲನೆಗೆ ಒತ್ತಾಯ
ಲಕ್ಷಾಂತರ ಜನರ ಪ್ರಜಾಪ್ರಭುತ್ವದ ಹಕ್ಕನ್ನು ಕದಿಯುವ ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಮೇಲಿನ ಹಗಲು ದರೋಡೆಯಾಗಿದೆ ಎಂದು ಕಿಡಿಕಾರಿರುವ ಅವರು, ಅಕ್ರಮವಾಗಿ ಕೈಬಿಡಲಾದ ಎಲ್ಲಾ 13,000ಕ್ಕೂ ಹೆಚ್ಚು ಮತದಾರರ ಮಾಹಿತಿಯನ್ನು ತಕ್ಷಣವೇ ಮರು-ಪರಿಶೀಲನೆ ನಡೆಸಿ, ಅವರನ್ನು ಮರಳಿ ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
