ಬೆಂಗಳೂರು: ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ದಿ ರಿಯಲ್ ಪ್ರಜಾಕೀಯ’ (The Real Prajakeeya) ಎಂಬ ನೂತನ ವೆಬ್‌ಸೈಟ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು. ಏಪ್ರಿಲ್ 1ರ ‘ಮೂರ್ಖರ ದಿನ’ವನ್ನು ‘ಇಂಟೆಲಿಜೆನ್ಸ್ ಡೇ’ (ಬುದ್ಧಿವಂತರ ದಿನ) ಎಂದು ಕರೆದ ಅವರು, ಮತದಾರರೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ.
ಏನಿದು ‘ದಿ ರಿಯಲ್ ಪ್ರಜಾಕೀಯ’ ವೆಬ್‌ಸೈಟ್?
ಈ ವೆಬ್‌ಸೈಟ್ ಕೇವಲ ಮಾಹಿತಿಗಾಗಿ ಅಲ್ಲ, ಬದಲಿಗೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವೇದಿಕೆಯಾಗಿದೆ. ಸಾರ್ವಜನಿಕರು ಉದ್ಯೋಗ, ಆರೋಗ್ಯ, ಗ್ರಾಮ ಪಂಚಾಯಿತಿ ಅಥವಾ ನಗರಸಭೆ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಳ್ಳಬಹುದು. ಜನರ ಸಮಸ್ಯೆಗಳಿಗೆ ಯಾರು ಸರಿಯಾದ ಮತ್ತು ವೈಜ್ಞಾನಿಕ ಪರಿಹಾರ ನೀಡುತ್ತಾರೋ, ಅವರೇ ಚುನಾವಣಾ ಅಭ್ಯರ್ಥಿಗಳಾಗುತ್ತಾರೆ. ಅಭ್ಯರ್ಥಿಗಳು ನೀಡುವ ಪರಿಹಾರಗಳನ್ನು ಜನರು ರೇಟಿಂಗ್ ಮೂಲಕ ಮೌಲ್ಯಮಾಪನ ಮಾಡುತ್ತಾರೆ. ಅತಿ ಹೆಚ್ಚು ರೇಟಿಂಗ್ ಪಡೆದವರೇ ಪ್ರಜಾಕೀಯದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ.
ಅಭ್ಯರ್ಥಿ ಆಯ್ಕೆಯಲ್ಲಿ ಪಾರದರ್ಶಕತೆ:
“ನಾನು ಯಾರಿಗೂ ಬಿ-ಫಾರಂ ಕೊಡಲ್ಲ, ಜನರೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ” ಎಂದು ಉಪೇಂದ್ರ ಸ್ಪಷ್ಟಪಡಿಸಿದರು. ಕಡಿಮೆ ರೇಟಿಂಗ್ ಬಂದ ಅಭ್ಯರ್ಥಿಗಳನ್ನು ಕೈಬಿಡಲಾಗುವುದು. ಎರಡನೇ ಬಾರಿ ಕನ್ವಿನ್ಸ್ ಮಾಡಲು ಜನರೇ ಅವಕಾಶ ನೀಡಿದರೆ ಮಾತ್ರ ಅವರು ಸ್ಪರ್ಧಿಸಲು ಸಾಧ್ಯ. ವೆಬ್‌ಸೈಟ್‌ನಲ್ಲಿ ಯಾವುದೇ ರೀತಿಯ ಮ್ಯಾನಿಪ್ಯುಲೇಷನ್ ಅಥವಾ ಡೇಟಾ ದುರ್ಬಳಕೆಗೆ ಅವಕಾಶವಿಲ್ಲ. ಇದು ಸಂಪೂರ್ಣ ಪಾರದರ್ಶಕ ಟೆಕ್ನಾಲಜಿಯಾಗಿದೆ ಎಂದರು.
ಮುಂಬರುವ GBA ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಗೂ ಇದೇ ಮಾದರಿಯಲ್ಲಿ ತಯಾರಿ ನಡೆಸಲಾಗುವುದು ಎಂದು ಉಪೇಂದ್ರ ತಿಳಿಸಿದರು. ಇನ್ನು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದಾಗ ಈ ಬಗ್ಗೆ ಚರ್ಚಿಸಿದಿರಾ ಎಂಬ ಪ್ರಶ್ನೆಗೆ, “ಅವರವರ ಭಾವಕ್ಕೆ ಭಕ್ತಿಗೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
