ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್-ಕಾಡುಗೋಡಿ ಮೆಟ್ರೋ ನಿಲ್ದಾಣದಲ್ಲಿ ತನ್ನನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಯುವತಿಯೊಬ್ಬರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಪೊಲೀಸರ ತ್ವರಿತ ಸ್ಪಂದನೆಯನ್ನು ಶ್ಲಾಘಿಸುವುದರ ಜೊತೆಗೆ ಇತರೆ ಮಹಿಳೆಯರಿಗೂ ಧೈರ್ಯ ತುಂಬಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದೇನು?
ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಹಸ್ಯವಾಗಿ ತನ್ನ ಮೊಬೈಲ್‌ನಲ್ಲಿ ಯುವತಿಯ ವಿಡಿಯೋ ಸೆರೆಹಿಡಿಯುತ್ತಿದ್ದ. ಇದನ್ನು ಗಮನಿಸಿದ ಯುವತಿ ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಯುವತಿಯ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಬೆನ್ನಟ್ಟಿ ಹಿಡಿದ ಯುವತಿ, ತನ್ನ ಬ್ಯಾಗ್ ಹಾಗೂ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಟ್ರೋ ಭದ್ರತಾ ಸಿಬ್ಬಂದಿಯ ನೆರವು ಕೇಳಲು ಮುಂದಾದಾಗ, ಆತ ತನ್ನ ಮೊಬೈಲ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಯುವತಿ ಈ ಎಲ್ಲ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು.
ಪೊಲೀಸರ ನೆರವಿಗೆ ಮೆಚ್ಚುಗೆ:
ಘಟನೆಯ ಬಳಿಕ ಕಾಡುಗೋಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಯುವತಿ ತಿಳಿಸಿದ್ದಾರೆ. “ಪೊಲೀಸರು ನನಗೆ ಬಹಳ ನೆರವಾಗಿದ್ದಾರೆ. ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಹೋಲುವ ಕೆಲವರನ್ನು ಈಗಾಗಲೇ ಗುರುತಿಸಿದ್ದು, ಆರೋಪಿಯನ್ನು ಖಚಿತಪಡಿಸಿಕೊಂಡ ಕೂಡಲೇ ಮುಂದಿನ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ” ಎಂದು ಅವರು ವಿವರಿಸಿದ್ದಾರೆ.
ಇಂತಹ ಕೀಚಕರನ್ನು ಸುಲಭವಾಗಿ ಬಿಡಬೇಡಿ:
ಇದೇ ವೇಳೆ ಹೆಣ್ಣುಮಕ್ಕಳಿಗೆ ಕಿವಿಮಾತು ಹೇಳಿರುವ ಅವರು, “ಯಾರಿಗೂ ಹೆದರಬೇಡಿ. ಪೊಲೀಸರು ನಿಮಗೆ ಖಂಡಿತ ನೆರವಾಗುತ್ತಾರೆ. ಆ ಧೈರ್ಯ ನಿಮ್ಮಲ್ಲಿರಲಿ. ಯಾರಾದರೂ ನಿಮ್ಮ ಬಳಿ ಅಸಭ್ಯವಾಗಿ ವರ್ತಿಸಿದರೆ ಸುಮ್ಮನಿರಬೇಡಿ, ಅವರನ್ನು ಎದುರಿಸಿ. ಒಂಟಿಯಾಗಿ ಎದುರಿಸಲು ಭಯವಾದರೆ ನೇರವಾಗಿ ಪೊಲೀಸರ ಬಳಿ ಹೋಗಿ ದೂರು ನೀಡಿ. ಇಂತಹ ಕೀಚಕರು ಸುಲಭವಾಗಿ ತಪ್ಪಿಸಿಕೊಳ್ಳಲು ಬಿಡಬೇಡಿ” ಎಂದು ಕರೆ ನೀಡಿದ್ದಾರೆ.
ಉಡುಪಿನ ಬಗ್ಗೆ ಸಮರ್ಥನೆ ಬೇಕಿಲ್ಲ:
“ನಾನು ಸಂಪೂರ್ಣವಾಗಿ ಮೈಮುಚ್ಚುವಂತಹ ಫಾರ್ಮಲ್ ಉಡುಪನ್ನೇ ಧರಿಸಿದ್ದೆ. ಆದರೂ ಈ ಘಟನೆ ನಡೆದಿದೆ. ಕಿರುಕುಳಕ್ಕೊಳಗಾದಾಗ ಮಹಿಳೆಯರು ತಾವು ಧರಿಸಿದ್ದ ಉಡುಪಿನ ಬಗ್ಗೆ ಸಮರ್ಥನೆ ನೀಡುವ ಅಗತ್ಯವಿಲ್ಲ” ಎಂದು ಅವರು ತಮ್ಮ ಮೊದಲ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದರು. ಘಟನೆಯ ಬಳಿಕ ಬೆಂಬಲವಾಗಿ ನಿಂತ ಹಾಗೂ ಧ್ವನಿಗೂಡಿಸಿದ ಪ್ರತಿಯೊಬ್ಬರಿಗೂ ಯುವತಿ ಕೃತಜ್ಞತೆ ಸಲ್ಲಿಸಿದ್ದಾರೆ.
