S Shorts

ಪಂಪ್‌ಸೆಟ್ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿ ಯುವಕ ದುರ್ಮರಣ; GESCOM ವಿರುದ್ಧ ಗ್ರಾಮಸ್ಥರ ಆಕ್ರೋಶ

ಪಂಪ್‌ಸೆಟ್ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿ ಯುವಕ ದುರ್ಮರಣ; GESCOM ವಿರುದ್ಧ ಗ್ರಾಮಸ್ಥರ ಆಕ್ರೋಶ
Author: Sagaradventure
Posted By: Sagaradventure
Updated: Jul 20, 2026 | 11:12 AM

ವಿಜಯನಗರ: ಜಮೀನಿನಲ್ಲಿ ಪಂಪ್‌ಸೆಟ್ ದುರಸ್ತಿ ಮಾಡಲು ಹೋಗಿದ್ದ 25 ವರ್ಷದ ಯುವಕನೊಬ್ಬ ವಿದ್ಯುತ್ ಆಘಾತದಿಂದ (ಎಲೆಕ್ಟ್ರೋಕ್ಯೂಷನ್) ಸ್ಥಳದಲ್ಲೇ ಮೃ*ತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮಹಾಜನದಹಳ್ಳಿ ನಿವಾಸಿ ಪ್ರವೀಣ್ (25) ಮೃ*ತಪಟ್ಟ ದುರ್ದೈವಿ ಯುವಕ.

ರಾತ್ರಿ ಜಮೀನಿಗೆ ಹೋದಾಗ ಬೆಳಕಿಗೆ ಬಂದ ಘಟನೆ

ಯುವಕ ಪ್ರವೀಣ್ ತನ್ನ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹರಿಸಲು ತೆರಳಿದ್ದನು. ಈ ವೇಳೆ ತೋಟದ ಪಂಪ್‌ಸೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದನ್ನು ಸ್ವತಃ ಸರಿಪಡಿಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಹಠಾತ್ ವಿದ್ಯುತ್ ಪ್ರವಹಿಸಿ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಇತ್ತ ದಿನವಿಡೀ ಜಮೀನಿಗೆ ಹೋಗಿದ್ದ ಪ್ರವೀಣ್ ತಡರಾತ್ರಿಯಾದರೂ ಮನೆಗೆ ಮರಳಿ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಜಮೀನಿಗೆ ಹೋಗಿ ನೋಡಿದ್ದಾರೆ. ಈ ವೇಳೆ ಪ್ರವೀಣ್ ಶ*ವವಾಗಿ ಬಿದ್ದಿರುವುದು ಕಂಡುಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ

ಈ ಘಟನೆಗೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (GESCOM) ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ನೇರ ಕಾರಣ ಎಂದು ಮೃ*ತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಲೈನ್‌ಗಳ ನಿರ್ವಹಣೆ ಮಾಡದ ಕಾರಣ ಈ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.