ಮಂಗಳೂರು: ಸಿನಿಮಾ ಕಥೆಯನ್ನು ಮೀರಿಸುವ ರೀತಿಯಲ್ಲಿ ಡ್ರಗ್ಸ್ ಸಾಗಾಟ ನಡೆಸಿದ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಮಾಜಸೇವೆ ಹೆಸರಿನಲ್ಲಿ ಓಡಿಸುತ್ತಿದ್ದ ಆಂಬುಲೆನ್ಸ್‌ನ್ನೇ ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಆಂಬುಲೆನ್ಸ್ ಚಾಲಕ ಜಲೀಲ್‌ಗಾಗಿ ಮಂಗಳೂರು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಇತ್ತೀಚೆಗೆ ಬಾಗಲಕೋಟೆಯಲ್ಲಿ ಸುಮಾರು ₹5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಈ ಜಾಲದ ಸುಳಿವು ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಜಲೀಲ್‌ನನ್ನು ನಾಲ್ಕನೇ ಆರೋಪಿಯಾಗಿ ಗುರುತಿಸಿದ್ದಾರೆ.
ತನಿಖೆ ಪ್ರಕಾರ, ಸಮಾಜಸೇವೆಯ ಉದ್ದೇಶದಿಂದ ಆಂಬುಲೆನ್ಸ್ ಸೇವೆ ನಡೆಸುತ್ತಿದ್ದ ಜಲೀಲ್, ಅದೇ ವಾಹನವನ್ನು ಬಳಸಿಕೊಂಡು ಡ್ರಗ್ಸ್ ಸಾಗಾಟ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ಆಂಬುಲೆನ್ಸ್ ಸಮೇತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಪ್ರಕರಣದಲ್ಲಿ ಅಲ್ತಾಫ್ ಹಾಗೂ ಮುಸ್ತಫಾ ಎಂಬವರೊಂದಿಗೆ ಜಲೀಲ್ ಸಂಪರ್ಕ ಹೊಂದಿದ್ದು, ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ನಡುವಿನ ಸಂಪರ್ಕ, ಡ್ರಗ್ಸ್ ಜಾಲದ ವ್ಯಾಪ್ತಿ ಹಾಗೂ ಸಾಗಾಟದ ಮಾರ್ಗಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯ ಬಳಿಕವೇ ಸ್ಪಷ್ಟವಾಗಲಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಲೀಲ್ ಬಂಧನಕ್ಕಾಗಿ ಮಂಗಳೂರು ಪೊಲೀಸರು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
