S Shorts

ಬಳ್ಳಾರಿಯಲ್ಲಿ ಮುಗಿಯದ Reddy Vs Reddy: ಸಿಐಡಿ ತನಿಖೆ ಒಪ್ಪದ ಜನಾರ್ದನ, ಸಿಬಿಐ ಮೊರೆ!

ಬಳ್ಳಾರಿಯಲ್ಲಿ ಮುಗಿಯದ Reddy Vs Reddy: ಸಿಐಡಿ ತನಿಖೆ ಒಪ್ಪದ ಜನಾರ್ದನ, ಸಿಬಿಐ ಮೊರೆ!
Author: Devaraj Naik
Posted By: Devaraj Naik
Updated: Feb 16, 2026 | 6:05 PM

ಕೊಪ್ಪಳ: ಬಳ್ಳಾರಿಯಲ್ಲಿ ಬ್ಯಾನರ್ ಹರಿದು ಹಾಕಿದ ವಿಚಾರವಾಗಿ ಆರಂಭವಾದ ರಾಜಕೀಯ ಸಂಘರ್ಷ ಈಗ ತಾರಕಕ್ಕೇರಿದೆ. ಈ ಪ್ರಕರಣದ ಕುರಿತು ರಾಜ್ಯ ಸರ್ಕಾರವು ಸಿಐಡಿ (CID) ತನಿಖೆಗೆ ಆದೇಶಿಸಿದ್ದರೂ, ಇದನ್ನು ತಿರಸ್ಕರಿಸಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸುವಂತೆ ಕೋರಿ ಬರುವ ಶುಕ್ರವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಇಂದು ಇಲ್ಲಿ ಮಾತನಾಡಿದ ಅವರು, ಬಳ್ಳಾರಿ ಶಾಸಕ ಭರತ್ ರೆಡ್ಡಿ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಹತ್ಯೆ ಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಜನವರಿ 1 ರಂದು ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರು ಗುಂಡೇಟಿನಿಂದ ಸಾವನ್ನಪ್ಪಿದ್ದರು. ಈ ಸಾವಿಗೆ ಭರತ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ನಡೆಸಿದ ಫೈರಿಂಗ್ ಕಾರಣ ಎಂದು ಆರೋಪಿಸಿರುವ ಜನಾರ್ದನ ರೆಡ್ಡಿ, ಈ ಘಟನೆಯಲ್ಲಿ ಪೊಲೀಸರು ಸಹ ಶಾಸಕರ ಪರವಾಗಿ ನಿಂತಿದ್ದಾರೆ ಎಂದು ದೂರಿದ್ದಾರೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಜನರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಆದರೆ, ಇದು ರಾಜಕೀಯ ಪ್ರೇರಿತ ಪಿತೂರಿ ಎಂದು ಹೇಳಿರುವ ರೆಡ್ಡಿ, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಹತ್ವದ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿ ನ್ಯಾಯ ಕೋರುವುದಾಗಿ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿರುವ ಅವರು, ಸ್ಥಳೀಯ ಶಾಸಕರು ಮತ್ತು ಅವರ ಸಹಚರರ ವಿರುದ್ಧ ಸಮಗ್ರ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.