S Shorts

Best Social Science Researcher’ Award: ಡಾ.ಮಹಾಲಕ್ಷ್ಮಿ ಮಹಾನಂದ ಭೂಶಿಗೆ ‘ಅತ್ಯುತ್ತಮ ಸಮಾಜ ವಿಜ್ಞಾನ ಸಂಶೋಧಕಿ’ ಪ್ರಶಸ್ತಿ

Best Social Science Researcher’ Award: ಡಾ.ಮಹಾಲಕ್ಷ್ಮಿ ಮಹಾನಂದ ಭೂಶಿಗೆ ‘ಅತ್ಯುತ್ತಮ ಸಮಾಜ ವಿಜ್ಞಾನ ಸಂಶೋಧಕಿ’ ಪ್ರಶಸ್ತಿ
Author: Kalanvitha Jain
Posted By: Kalanvitha Jain
Updated: Feb 17, 2026 | 5:33 PM

ಬೆಂಗಳೂರು: ಇಲ್ಲಿನ ಕೆ.ಆರ್. ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಹಾಲಕ್ಷ್ಮಿ ಮಹಾನಂದ ಭೂಶಿ ಅವರಿಗೆ ‘ಅತ್ಯುತ್ತಮ ಸಮಾಜ ವಿಜ್ಞಾನ ಸಂಶೋಧಕಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹಾವೇರಿಯ ರಾಣೆಬೆನ್ನೂರಿನ ಆರ್.ಟಿ.ಇ.ಎಸ್ (RTES) ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ 5ನೇ ಅಂತಾರಾಷ್ಟ್ರೀಯ ಬಹುವಿಷಯಕ ಸಂಶೋಧನಾ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಧಾರವಾಡದ ಉನ್ನತಿ ಎಜುಕೇಶನ್ ಸಂಸ್ಥೆ ಹಾಗೂ ತಮಿಳುನಾಡಿನ ಸತ್ಯಂ ಸೋಷಿಯಲ್ ಸರ್ವಿಸ್ ಆರ್ಗನೈಸೆಷನ್ ಜಂಟಿಯಾಗಿ ಈ ಗೌರವವನ್ನು ನೀಡಿವೆ.

ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಡಾ.ಮಹಾಲಕ್ಷ್ಮಿ ಅವರು ಮಾಡಿರುವ ಸುದೀರ್ಘ ಸಂಶೋಧನಾ ಸಾಧನೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ವೃತ್ತಿ ನಿಷ್ಠೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆಯು ಅಪಾರವಾದುದು ಎಂದು ಆಯೋಜಕರು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಸಿ. ಎ. ಹರಿಹರ, ಸಂಯೋಜಕರಾದ ಡಾ. ಆನಂದ ಖಾನಾಪೇಠ, ಪ್ರಮುಖರಾದ ಡಾ. ಮಧುಕುಮಾರ ಆರ್, ಡಾ. ಅಂಜಿ ಎ, ಡಾ. ಸಂಗೀತಾ ಮಾನೆ, ಡಾ.ಎಂ. ಎಚ್. ಹೆಬ್ಬಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

ಡಾ.ಮಹಾಲಕ್ಷ್ಮಿ ಅವರ ಈ ಸಾಧನೆಗೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.