ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದ ಗುಳ್ಮಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.
ಬುಧವಾರ ರಾತ್ರಿ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಗ್ರಹವನ್ನು ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಮೆರವಣಿಗೆಯು ಮದರಸಾ ಹಾಗೂ ರೈಲ್ವೆ ನಿಲ್ದಾಣ ರಸ್ತೆಯತ್ತ ಸಾಗುತ್ತಿದ್ದಾಗ ಈ ಅಹಿತಕರ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟದ ಆರೋಪ
ಘಟನೆಗೆ ಸಂಬಂಧಿಸಿದಂತೆ ಬಂದರ ರಸ್ತೆಯ ನಿವಾಸಿಗಳಾದ ಅಬ್ದುಲ್ ಅಲಿಂ ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ಮೊದಲು ದೂರು ದಾಖಲಿಸಿದ್ದಾರೆ. ರಾತ್ರಿ 9.45ರ ಸುಮಾರಿಗೆ ಮೆರವಣಿಗೆ ಸಾಗುತ್ತಿದ್ದ ವೇಳೆ ರಸ್ತೆಯ ಪಕ್ಕದ ಪ್ರಥಮ ಮಹಡಿಯಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ನೆಲಮಹಡಿಯಲ್ಲಿರುವ ತಾಜುಸುನ್ನಾ ಅರೇಬಿಕ್ ಮದರಸಾ ಮೇಲೆ ಕಲ್ಲು ತೂರಲಾಗಿದೆ. ಇದರಿಂದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ಮುಸ್ಲಿಂ ಸಮುದಾಯದ ನೂರಾರು ಜನರು ಪೊಲೀಸ್ ಠಾಣೆ ಎದುರು ಜಮಾಯಿಸಿ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ.
ಗಣೇಶೋತ್ಸವ ಸಮಿತಿಯಿಂದ ಪ್ರತಿದೂರು ದಾಖಲು
ಮಸೀದಿಗೆ ಕಲ್ಲು ತೂರಾಟವಾಗಿರುವ ಬಗ್ಗೆ ಮಧ್ಯರಾತ್ರಿ ದೂರು ದಾಖಲಾದ ಬೆನ್ನಲ್ಲೇ, ಗುರುವಾರ ನಸುಕಿನ ಜಾವ 4 ಗಂಟೆಗೆ ತಲಾಂದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ ಪ್ರತಿದೂರು ನೀಡಿದ್ದಾರೆ. ರಾತ್ರಿ 9.30ರ ವೇಳೆಗೆ ಕಟ್ಟಡವೊಂದರ ಮೇಲಿನಿಂದ ಕಿಡಿಗೇಡಿಗಳು ಗಣೇಶ ವಿಗ್ರಹದ ಕಡೆಗೆ ಕಲ್ಲುಗಳನ್ನು ತೂರಿದ್ದು, ಕೋಮು ಸಾಮರಸ್ಯ ಕದಡುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ, ಎಎಸ್ಪಿ ರಾನು ಗುಪ್ತ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
