ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ್ ಅವರ ವಿವಾದಿತ ಹೇಳಿಕೆಯ ವಿಡಿಯೋ ಪ್ರಕರಣವು ಇದೀಗ ಅಚ್ಚರಿಯ ತಿರುವು ಪಡೆದುಕೊಂಡಿದೆ. ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಸಭೆ ನಡೆಸುವಾಗ ಇನ್ಸ್‌ಪೆಕ್ಟರ್ ನೀಡಿದ್ದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಮಟ್ಟದ ವಿವಾದವನ್ನು ಸೃಷ್ಟಿಸಿತ್ತು. ಸೆಪ್ಟೆಂಬರ್ 17 ರಂದು ಈ ಘಟನೆಗೆ ಸಂಬಂಧಿಸಿದಂತೆ ಇದೀಗ ವಿಡಿಯೋ ಚಿತ್ರೀಕರಣ ಮಾಡಿದ್ದ ಯೂಟ್ಯೂಬರ್ ಮಂಜು ಎಂಬುವವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ವಿಡಿಯೋವನ್ನು ಹರಿಬಿಡಲಾಗಿದೆ ಎಂದು ಆರೋಪಿಸಿ ಸ್ವತಃ ಇನ್ಸ್‌ಪೆಕ್ಟರ್ ಧನಂಜಯ್ ಅವರೇ ದೂರು ನೀಡಿದ್ದಾರೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತೀವ್ರ ಪ್ರತಿಕ್ರಿಯೆ ನೀಡಿರುವ ಯೂಟ್ಯೂಬರ್ ಮಂಜು, ಇನ್ಸ್‌ಪೆಕ್ಟರ್ ವಿರುದ್ಧವೇ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮಗೆ ಠಾಣೆಗೆ ಬರುವಂತೆ ಆಹ್ವಾನ ನೀಡಿದ್ದು ಮತ್ತು ಸಭೆಯ ವಿಡಿಯೋ ಚಿತ್ರೀಕರಣ ಮಾಡಲು ಸೂಚಿಸಿದ್ದು ಸ್ವತಃ ಇನ್ಸ್‌ಪೆಕ್ಟರ್ ಧನಂಜಯ್ ಅವರೇ ಎಂದು ಮಂಜು ಸ್ಪಷ್ಟಪಡಿಸಿದ್ದಾರೆ.
ಕಾನ್‌ಸ್ಟೇಬಲ್ ಯಶ್ವಂತ್ ಅವರ ಮೂಲಕ ತಮ್ಮನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು ಹಾಗೂ ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ನಡೆದ ಚರ್ಚೆಗಳನ್ನು ಚಿತ್ರೀಕರಿಸಲು ಹೇಳಲಾಗಿತ್ತು. ಈ ಚರ್ಚೆಯ ವೇಳೆ ಮಸೀದಿ ವಿಚಾರವೂ ಪ್ರಸ್ತಾಪವಾಗಿತ್ತು ಎಂದು ಮಂಜು ಘಟನೆಯ ಸಂಪೂರ್ಣ ವಿವರಣೆ ನೀಡಿದ್ದಾರೆ.
ವಿಡಿಯೋವನ್ನು ರೆಕಾರ್ಡ್ ಮಾಡಿದ ಬಳಿಕ ಅದನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುವಾಗ ಇನ್ಸ್‌ಪೆಕ್ಟರ್ ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಜೊತೆಗೆ, ವಿಡಿಯೋ ಅಪ್ಲೋಡ್ ಮಾಡದಂತೆ ತಮಗೆ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನೆಯನ್ನೂ ನೀಡಿರಲಿಲ್ಲ ಎಂದು ಮಂಜು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದೀಗ ತಮ್ಮದೇ ಹೇಳಿಕೆ ವಿವಾದಕ್ಕೀಡಾಗಿ ಮೇಲಾಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾದ ಬಳಿಕ, ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಏಕೈಕ ಉದ್ದೇಶದಿಂದ ಇನ್ಸ್‌ಪೆಕ್ಟರ್ ಅವರು ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿ ಬಲಿಪಶು ಮಾಡುತ್ತಿದ್ದಾರೆ ಎಂದು ಮಂಜು ಆರೋಪಿಸಿದ್ದು, ಪ್ರಕರಣವು ಮತ್ತಷ್ಟು ಕುತೂಹಲ ಕೆರಳಿಸಿದೆ.
