ಭುವನೇಶ್ವರ: ನೀಟ್ (NEET) ಪೇಪರ್ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ನೀಡಿದ ರಾಜೀನಾಮೆಯನ್ನು ಟೀಕಿಸಿ ಪೋಸ್ಟ್ ಮಾಡಿದ್ದ ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿಯ ಇನ್‌ಸ್ಟಾಗ್ರಾಮ್ ಖಾತೆ ಇದೀಗ ನಾಪತ್ತೆಯಾಗಿದೆ. ಒಡಿಶಾ ಬಿಜೆಪಿ ನಾಯಕರ ತೀವ್ರ ಟೀಕೆಯ ನಡುವೆಯೂ ಪೋಸ್ಟ್ ಅಳಿಸಲು ನಿರಾಕರಿಸಿದ್ದ ಅವರ ಖಾತೆಯನ್ನು ‘ಟೇಕ್ ಡೌನ್’ (Take down) ಮಾಡಲಾಗಿದೆ ಎಂದು ವರದಿಯಾಗಿದೆ.
ವಿವಾದಕ್ಕೆ ಕಾರಣವಾದ ಇನ್‌ಸ್ಟಾಗ್ರಾಮ್ ಪೋಸ್ಟ್
ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಚಿನ್ ರಾಹರ್ ಅವರು, ರಾಷ್ಟ್ರಧ್ವಜದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರ ಫೋಟೋ ಹಾಕಿ, “ನೀಟ್ ಸೋರಿಕೆ ಅವಾಂತರದ ಬಗ್ಗೆ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗಳ ನಡುವೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ” ಎಂದು ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಇದು ಒಡಿಶಾ ಬಿಜೆಪಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಹಾಗೂ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿತ್ತು.
ಪೋಸ್ಟ್ ಡಿಲೀಟ್ ಮಾಡಲ್ಲ ಎಂದು ಪಟ್ಟು ಹಿಡಿದಿದ್ದ ಪುತ್ರಿ
ಈ ಪೋಸ್ಟ್ ಅಳಿಸಿಹಾಕುವಂತೆ ಧರ್ಮೇಂದ್ರ ಪ್ರಧಾನ್ ಅವರ ಕಚೇರಿಯಿಂದ ಸಂಸದೆ ಅಪರಾಜಿತಾ ಸಾರಂಗಿ ಅವರಿಗೆ ಕರೆ ಬಂದಿತ್ತು. ತಾಯಿಯ ಸೂಚನೆಯ ಹೊರತಾಗಿಯೂ ಪೋಸ್ಟ್ ಅಳಿಸಲು ಅರ್ಚಿತಾ ನಿರಾಕರಿಸಿದ್ದರು.
ಬದಲಿಗೆ ಮತ್ತೊಂದು ಪೋಸ್ಟ್ ಹಾಕಿದ್ದ ಅವರು, “ನನ್ನ ಹಿಂದಿನ ಪೋಸ್ಟ್ ಡಿಲೀಟ್ ಮಾಡುವಂತೆ ನನ್ನ ತಾಯಿಗೆ ಮೆಸೇಜ್ ಮಾಡುವ ಡಿಪಿ (ಧರ್ಮೇಂದ್ರ ಪ್ರಧಾನ್) ಅವರ ಪಿಎ (PA) ಅವರಿಗೆ – ತಲೆಕೆಡಿಸಿಕೊಳ್ಳಬೇಡಿ, ನಾನು ಅದನ್ನು ಡಿಲೀಟ್ ಮಾಡುವುದಿಲ್ಲ. ಜೈ ಜಗನ್ನಾಥ್! ಜೈ ಹಿಂದ್” ಎಂದು ನೇರವಾಗಿ ತಿರುಗೇಟು ನೀಡಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಸಮರ್ಥನೆ
ವಿವಾದದ ಕುರಿತು ಪ್ರತಿಕ್ರಿಯಿಸಿದ್ದ ಸಂಸದೆಯ ಕಚೇರಿ ಸಹಾಯಕರು, “ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆಕೆ ಜೆನ್-ಝೀ (Gen Z) ಪೀಳಿಗೆಯವಳು ಮತ್ತು ತನ್ನ ಹೇಳಿಕೆಗೆ ಬದ್ಧಳಾಗಿದ್ದಾಳೆ. ಆಕೆಗೆ ತನ್ನ ಮನಸ್ಸಿನ ಮಾತನ್ನು ಹೇಳುವ ಹಕ್ಕಿದೆ” ಎಂದು ಆಕೆಯ ವಾಕ್ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಈ ಬೆಳವಣಿಗೆಗಳ ಬೆನ್ನಲ್ಲೇ ಅರ್ಚಿತಾ ಅವರ ಇನ್‌ಸ್ಟಾಗ್ರಾಮ್ ಖಾತೆ ಇದೀಗ ಸರ್ಚ್ ಮಾಡಿದರೂ ಸಿಗುತ್ತಿಲ್ಲ.
ಪ್ರಧಾನ್ ಬೆಂಬಲಕ್ಕೆ ನಿಂತ ತಾಯಿ ಅಪರಾಜಿತಾ ಸಾರಂಗಿ
ಮಗಳ ಪೋಸ್ಟ್ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಸಂಸದೆ ಅಪರಾಜಿತಾ ಸಾರಂಗಿ ಅವರು ಎಕ್ಸ್ (X) ಖಾತೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಶ್ರೀ ಧರ್ಮೇಂದ್ರ ಪ್ರಧಾನ್ ಜಿ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಬಹಳ ಧೈರ್ಯ ಬೇಕು. ಈ ಅತ್ಯಂತ ಕಷ್ಟದ ಸಮಯದಲ್ಲಿ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಅವರ ಮುಂದಿನ ದಿನಗಳಿಗೆ ಶುಭ ಹಾರೈಸುತ್ತೇನೆ. ಭಗವಾನ್ ಜಗನ್ನಾಥನು ಅವರಿಗೆ ಒಳಿತು ಮಾಡಲಿ” ಎಂದು ಪೋಸ್ಟ್ ಮಾಡಿದ್ದಾರೆ.
