S Shorts

ಕಾವೇರಿ ಬಿಕ್ಕಟ್ಟು: ಭಾನುವಾರ ಸರ್ವಪಕ್ಷ ಸಭೆ ಕರೆದ CM ಡಿಕೆಶಿ; ಸಂಪುಟ ವಿಚಾರದಲ್ಲಿ BSYಗೆ ಟಾಂಗ್!

ಕಾವೇರಿ ಬಿಕ್ಕಟ್ಟು: ಭಾನುವಾರ ಸರ್ವಪಕ್ಷ ಸಭೆ ಕರೆದ CM ಡಿಕೆಶಿ; ಸಂಪುಟ ವಿಚಾರದಲ್ಲಿ BSYಗೆ ಟಾಂಗ್!
Author: Sagaradventure
Posted By: Sagaradventure
Updated: Jul 30, 2026 | 4:53 PM

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಮುಂದಿನ ಕಾನೂನು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಇದೇ ಭಾನುವಾರ (ಆಗಸ್ಟ್ 2) ಬೆಂಗಳೂರಿನ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಭೆಗೆ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶದ ವಿರುದ್ಧ ಪ್ರಾಧಿಕಾರದ ಮುಂದೆ ಇಂದು ಮೇಲ್ಮನವಿ ಸಲ್ಲಿಸಲಾಗಿದ್ದು, ಮುಂದಿನ ಹೋರಾಟದ ಹಾದಿ ಹೇಗಿರಬೇಕು ಎಂಬುದನ್ನು ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.

ಈ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರೊಂದಿಗೂ ಚರ್ಚಿಸಲಾಗಿದ್ದು, ರಾಜ್ಯದ ಹಿತ ಕಾಪಾಡಲು ಅವರೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು. 

ಇದೇ ವೇಳೆ, ಡಿಎಂಕೆ ನಾಯಕ ಅನ್ಬುಮಣಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ನಮಗೆ ಪರಸ್ಪರ ಕಿತ್ತಾಟ ಮಾಡಲು ಇಷ್ಟವಿಲ್ಲ. ನೆಲದ ಕಾನೂನು ಇದೆ, ಅದನ್ನು ಪರಸ್ಪರ ಗೌರವಿಸಿಕೊಂಡು ದೇಶದ ಹಿತಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬದ ಕುರಿತು ಬಿಜೆಪಿ ನಾಯಕರ ಟೀಕೆಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದರು. “ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಸಚಿವ ಸಂಪುಟವನ್ನೇ ರಚನೆ ಮಾಡದೇ ಒಬ್ಬರೇ ಅಧಿಕಾರ ಮಾಡಿರಲಿಲ್ಲವೇ? ಆಗ ಅಪ್ಪ-ಮಗ ಇಬ್ಬರೇ ಅಧಿಕಾರವನ್ನು ಅನುಭವಿಸಲಿಲ್ಲವೇ?” ಎಂದು ಅವರು ಬಿಜೆಪಿ ನಾಯಕರಿಗೆ ಮರುಪ್ರಶ್ನೆ ಹಾಕುವ ಮೂಲಕ ವಾಗ್ದಾಳಿ ನಡೆಸಿದರು.