ಬೆಂಗಳೂರಿನ ದೇವರಜೀವನಹಳ್ಳಿ (ಡಿ.ಜೆ. ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯಕ್ಕೆ ತೆರಳಿದ್ದ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾರಬ್ ಮತ್ತು ದಸ್ತಗೀರ್ ಎಂಬ ಇಬ್ಬರು ಆರೋಪಿಗಳನ್ನು ಡಿ.ಜೆ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಅಧಿಕಾರಿಯನ್ನು ಕೊಳಚೆ ನಿರ್ಮೂಲನಾ ಮಂಡಳಿ (ಸ್ಲಂ ಡೆವಲಪ್‌ಮೆಂಟ್ ಬೋರ್ಡ್) ಸೂಪರಿಂಟೆಂಡೆಂಟ್ ಫಕೀರಪ್ಪ ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ 1:30ರ ಸುಮಾರಿಗೆ ರೋಶನ್ ನಗರದ ಕೌಸರ್ ಮಸೀದಿ ಬಳಿ GBA ಅಧಿಕಾರಿಯಾಗಿರುವ ಫಕೀರಪ್ಪ ಅವರು SIR ಕಾರ್ಯದಲ್ಲಿದ್ದಾಗ ಈ ಘಟನೆ ನಡೆದಿದೆ. ಆರೋಪಿ ದಸ್ತಗೀರ್ ತನಗೆ SIR ಫಾರ್ಮ್ ನೀಡುವಂತೆ ಅಧಿಕಾರಿಗಳ ಬಳಿ ಗಲಾಟೆ ತೆಗೆದಿದ್ದಾನೆ. ಆದರೆ, ಆತ ಜಯನಗರಕ್ಕೆ ಸ್ಥಳಾಂತರಗೊಂಡಿರುವುದರಿಂದ ಫಾರ್ಮ್ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಕೋಪಗೊಂಡ ದಸ್ತಗೀರ್ ಹಾಗೂ ಆತನಿಗೆ ಸಾಥ್ ನೀಡಿದ ಯಾರಬ್, ಏಕಾಏಕಿ ಫಕೀರಪ್ಪ ಅವರ ಮುಖ ಮತ್ತು ಕಣ್ಣಿಗೆ ರಕ್ತ ಬರುವಂತೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
