S Shorts

ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳ ಹಣ ಲೂಟಿ; Golmaal ಒಪ್ಪಿಕೊಂಡ ಗ್ಯಾರಂಟಿ ಸಮಿತಿ ಅಧ್ಯಕ್ಷ!

ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳ ಹಣ ಲೂಟಿ; Golmaal ಒಪ್ಪಿಕೊಂಡ ಗ್ಯಾರಂಟಿ ಸಮಿತಿ ಅಧ್ಯಕ್ಷ!
Author: Sagaradventure
Posted By: Sagaradventure
Updated: Aug 9, 2026 | 12:19 PM

ಕೊಪ್ಪಳ: ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ಜಮೆಯಾಗುತ್ತಿರುವ ಹಾಗೂ ಆ ಹಣವನ್ನು ಅಕ್ರಮವಾಗಿ ಡ್ರಾ ಮಾಡಿಕೊಳ್ಳುತ್ತಿರುವ ವಿಚಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾಸ್ ರೆಡ್ಡಿ ಅವರು ವಿಡಿಯೋ ಬಿಡುಗಡೆ ಮಾಡಿದ್ದು, ಗೋಲ್‌ಮಾಲ್ ನಡೆದಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಗೋಲ್‌ಮಾಲ್ ಒಪ್ಪಿಕೊಂಡ ಸಮಿತಿ ಅಧ್ಯಕ್ಷ 

ಆರಂಭದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ನಡೆದಿಲ್ಲ ಎಂದು ವಾದಿಸುತ್ತಿದ್ದ ರೆಡ್ಡಿ ಶ್ರೀನಿವಾಸ್, ಇದೀಗ ಮೃತಪಟ್ಟವರ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. “ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕುವುದರಿಂದ ಇಲಾಖೆಯ ಮಟ್ಟದಲ್ಲಿ ಯಾವುದೇ ಗೋಲ್‌ಮಾಲ್ ಆಗಲು ಸಾಧ್ಯವಿಲ್ಲ. ಆದರೆ, ಫಲಾನುಭವಿಗಳು ಮೃತಪಟ್ಟ ನಂತರವೂ ಅವರ ಖಾತೆಯಲ್ಲಿ ಜಮೆಯಾಗುತ್ತಿರುವ ಹಣವನ್ನು ಬೇರೆಯವರು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಣ ಡ್ರಾ ಮಾಡಿದರೆ ಜೈಲು ಗ್ಯಾರಂಟಿ, ಅಕೌಂಟ್ ಸೀಜ್‌ಗೆ ಸೂಚನೆ 

“ಸತ್ತವರ ಬ್ಯಾಂಕ್ ಖಾತೆಗಳನ್ನು ಯಾರು ಬಳಸುತ್ತಿದ್ದಾರೆ ಹಾಗೂ ಅದರಿಂದ ಯಾರು ಹಣ ಡ್ರಾ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಖಾತೆಗಳ ಪರಿಶೀಲನೆ ನಡೆಸುತ್ತಿದ್ದೇವೆ. ಅಕ್ರಮವಾಗಿ ಹಣ ಡ್ರಾ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಕೇಸ್ ದಾಖಲಿಸಿ ಜೈಲಿಗೆ ಅಟ್ಟಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಇಂತಹ ದುರಪಯೋಗವಾಗಿರುವ ಖಾತೆಗಳನ್ನು ತಕ್ಷಣವೇ ಸೀಜ್ (ಮುಟ್ಟುಗೋಲು) ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪಾರದರ್ಶಕತೆ ಇದ್ದರೂ, ತಳಮಟ್ಟದಲ್ಲಿ ಸತ್ತವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಜಾಲದ ವಿರುದ್ಧ ಇದೀಗ ತನಿಖೆ ಚುರುಕುಗೊಂಡಿದೆ.