ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಿಯಲ್ಲಿ ವಿದ್ಯುತ್ ಟವರ್ ಅಳವಡಿಕೆ ವಿಚಾರವಾಗಿ ರೈತರು ಹಾಗೂ ಟೊರೆಂಟ್ (Torrent) ಕಂಪನಿಯ ಸಿಬ್ಬಂದಿ ನಡುವೆ ನಡೆದಿದ್ದ ಭಾರೀ ಗಲಾಟೆಯ ಹೊಸ ವಿಡಿಯೋಗಳು ಇದೀಗ ಬಹಿರಂಗವಾಗಿವೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ, ಟವರ್ ಅಳವಡಿಕೆಗೆ ಸೂಕ್ತ ಪರಿಹಾರ ನೀಡುವಂತೆ ಕೇಳಿದ ರೈತರ ಮೇಲೆ ಕಂಪನಿಯ ಸಿಬ್ಬಂದಿ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದೀಗ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ, ಹಲ್ಲೆಗೂ ಮುನ್ನ ಸಿಟ್ಟಿಗೆದ್ದಿದ್ದ ಸ್ಥಳೀಯ ರೈತರು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರನ್ನು ವಿದ್ಯುತ್ ಟವರ್ ಕಂಬಕ್ಕೆ ಕಟ್ಟಿಹಾಕಿ ಆಕ್ರೋಶ ವ್ಯಕ್ತಪಡಿಸಿರುವುದು ಸೆರೆಯಾಗಿದೆ. ಪರಿಹಾರ ನೀಡದೆ ಏಕಾಏಕಿ ಕಾಮಗಾರಿ ಆರಂಭಿಸಿದ್ದನ್ನು ವಿರೋಧಿಸಿದ ರೈತರು ಸಿಬ್ಬಂದಿಯನ್ನು ಕಟ್ಟಿಹಾಕಿದ್ದಾರೆ. ಈ ವೇಳೆ ರೈತರು ಹಾಗೂ ಸಿಬ್ಬಂದಿ ನಡುವೆ ಭೀಕರ ಹೊಡೆದಾಟ ನಡೆದಿದ್ದು, ಘರ್ಷಣೆಯಲ್ಲಿ ಟೊರೆಂಟ್ ಕಂಪನಿಯ ಕಾರ್ಮಿಕರಿಗೂ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ರೈತರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಪಶ್ಚಿಮ ಬಂಗಾಳ ಮೂಲದ 17 ಮಂದಿ ಕಂಪನಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಸೂಕ್ತ ಪರಿಹಾರದ ಭರವಸೆ ನೀಡದೆ ಕಾಮಗಾರಿಗೆ ಮುಂದಾಗಿದ್ದೇ ಈ ಇಡೀ ಗಲಾಟೆಗೆ ಮೂಲ ಕಾರಣ ಎನ್ನಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
