ಕೊಪ್ಪಳದ ಕೆ.ಆರ್.ಐ.ಡಿ.ಎಲ್ (KRIDL) ಹಗರಣದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಕುಡಾ) ಕೋಟ್ಯಂತರ ರೂಪಾಯಿ ಹಣ ಲೂಟಿಯಾಗಿರುವುದು ಇತ್ತೀಚಿನ ಆಡಿಟ್ ವರದಿಯಲ್ಲಿ ಸ್ಪಷ್ಟವಾಗಿ ಬಹಿರಂಗವಾಗಿದೆ. ಪ್ರಾಧಿಕಾರದಲ್ಲಿ ಕಳೆದ 18 ವರ್ಷಗಳಿಂದ ದಿನಗೂಲಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದ್ರ ಕುಮಾರ್ ಎಂಬ ಸಿಬ್ಬಂದಿ ಬರೋಬ್ಬರಿ ₹8 ಕೋಟಿಗೂ ಅಧಿಕ ಸಾರ್ವಜನಿಕ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡಿರುವುದು ಅಧಿಕಾರಿಗಳ ತಪಾಸಣೆ ವೇಳೆ ಪತ್ತೆಯಾಗಿದೆ.
ಆರೋಪಿ ರವೀಂದ್ರ ಕುಮಾರ್ ಪ್ರಾಧಿಕಾರದ ಹೆಸರಿನಲ್ಲೇ ನಕಲಿ ಹಾಗೂ ಅನಧಿಕೃತ ಬ್ಯಾಂಕ್ ಖಾತೆಗಳನ್ನು ತೆರೆದು, ಪ್ರಾಧಿಕಾರಕ್ಕೆ ಜಮೆಯಾಗಬೇಕಿದ್ದ ಬೃಹತ್ ಮೊತ್ತದ ಹಣವನ್ನು ನೇರವಾಗಿ ಆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚನೆ ಎಸಗಿದ್ದಾನೆ. ಈ ಅಕ್ರಮ ಲೂಟಿಯಲ್ಲಿ ರವೀಂದ್ರನ ಜೊತೆಗೆ ಪ್ರಾಧಿಕಾರದ ಹಿಂದಿನ ಆಯುಕ್ತರು ಹಾಗೂ ಇತರ ಕೆಲ ಪ್ರಮುಖರು ಭಾಗಿಯಾಗಿರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಆಡಿಟ್ ವರದಿಯಲ್ಲಿ ಈ ಹಣಕಾಸು ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪ್ರಾಧಿಕಾರದ ಹಾಲಿ ಆಯುಕ್ತ ಶರಣಪ್ಪ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಮುಖ್ಯ ಆರೋಪಿ ರವೀಂದ್ರ ಕುಮಾರ್‌ನನ್ನು ತಕ್ಷಣದಿಂದಲೇ ಕೆಲಸದಿಂದ ವಜಾಗೊಳಿಸಲಾಗಿದೆ.
ಪ್ರಾಧಿಕಾರದ ಹಣವನ್ನು ಲೂಟಿ ಮಾಡಿದ್ದಷ್ಟೇ ಅಲ್ಲದೆ, ಮತ್ತೊಂದೆಡೆ ಕೊಪ್ಪಳ ಕಿಮ್ಸ್ (KIMS) ಆಸ್ಪತ್ರೆಯ ಹಿಂಭಾಗದಲ್ಲಿರುವ ಸರೋಜಾ ಬಡಾವಣೆಯಲ್ಲಿ ಸಾರ್ವಜನಿಕರಿಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಹಣ ವಸೂಲಿ ಮಾಡಿ ವಂಚಿಸಿರುವ ಆರೋಪವೂ ಕೇಳಿಬಂದಿದೆ. ಈ ಬಹುಕೋಟಿ ಹಗರಣದ ಹಿಂದೆ ದೊಡ್ಡ ಜಾಲವೇ ಸಕ್ರಿಯವಾಗಿರುವ ಅನುಮಾನವಿದ್ದು, ಕೊಪ್ಪಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ.
