S Shorts

Diesel ಇಲ್ಲದೆ ಸ್ತಬ್ಧಗೊಂಡ ಬಸ್ ಸಂಚಾರ; ವಿದ್ಯಾರ್ಥಿಗಳು, ಪ್ರಯಾಣಿಕರ ಪರದಾಟ

Diesel ಇಲ್ಲದೆ ಸ್ತಬ್ಧಗೊಂಡ ಬಸ್ ಸಂಚಾರ; ವಿದ್ಯಾರ್ಥಿಗಳು, ಪ್ರಯಾಣಿಕರ ಪರದಾಟ
Author: Sagaradventure
Posted By: Sagaradventure
Updated: Oct 8, 2026 | 12:52 PM

ಕೊಪ್ಪಳ: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯ ಅನುಷ್ಠಾನದ ಬೆನ್ನಲ್ಲೇ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಹ ಘಟನೆಯೊಂದು ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲದೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡಿದ ಘಟನೆ ವರದಿಯಾಗಿದೆ.

ಡೀಸೆಲ್ ಬಿಲ್ ಪಾವತಿಸದ ಕಾರಣ ಇಂಧನದ ತೀವ್ರ ಅಭಾವ ಎದುರಾಗಿದೆ. ಇದರಿಂದಾಗಿ ಮಂಗಳವಾರ ಮತ್ತು ಬುಧವಾರ ವಿವಿಧ ಗ್ರಾಮೀಣ ಹಾಗೂ ಪ್ರಮುಖ ಮಾರ್ಗಗಳ ಬಸ್ ಸಂಚಾರ ದಿಢೀರ್ ರದ್ದಾಗಿದೆ. ಬೆಳಿಗ್ಗೆ ಶಾಲೆ, ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗೆ ಹೊರಟಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.

ಖಾಲಿ ಕೊಡ ಹಿಡಿದು ಶಾಸಕರ ಪ್ರತಿಭಟನೆ: 

ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಬಸ್ ನಿಲ್ದಾಣಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಸ್ ನಿಲ್ದಾಣದ ಮುಂದೆ ಖಾಲಿ ಕೊಡ ಹಿಡಿದು ಕುಳಿತ ಶಾಸಕರು, ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಬಳಿಕ ನಿಲ್ದಾಣದಲ್ಲಿ ಕಂಗಾಲಾಗಿ ನಿಂತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗಾಗಿ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ 5 ಖಾಸಗಿ ಕ್ರೂಸರ್ ವಾಹನಗಳನ್ನು ತರಿಸಿ, ಅವರನ್ನು ಸುರಕ್ಷಿತವಾಗಿ ಅವರವರ ಗ್ರಾಮಗಳಿಗೆ ಕಳುಹಿಸಿಕೊಟ್ಟರು.

‘ಬೊಕ್ಕಸ ಖಾಲಿ’: ಸರ್ಕಾರದ ವಿರುದ್ಧ ಶಾಸಕರ ಆಕ್ರೋಶ 

ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಹರಿಹಾಯ್ದ ಶಾಸಕ ದೊಡ್ಡನಗೌಡ ಪಾಟೀಲ್, “ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣವಾಗಿ ಖಾಲಿಯಾಗಿದೆ. ಸಾರಿಗೆ ಸಂಸ್ಥೆಗಳಿಗೆ ಅನುದಾನ ನೀಡದ ಕಾರಣ ಬಸ್‌ಗಳ ರಿಪೇರಿ ಹಾಗೂ ಡೀಸೆಲ್ ಖರೀದಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕುಷ್ಟಗಿ ಡಿಪೋದ ಈ ಸ್ಥಿತಿಯೇ ಸಾರಿಗೆ ಸಂಸ್ಥೆಯ ಕಂಗಾಲು ಸ್ಥಿತಿಗೆ ತಾಜಾ ಉದಾಹರಣೆಯಾಗಿದೆ” ಎಂದು ವಾಗ್ದಾಳಿ ನಡೆಸಿದರು.