ಬೆಂಗಳೂರು ಹೊರವಲಯದಲ್ಲಿ ಮನಿ ಡಬ್ಲಿಂಗ್ (ಹಣ ದ್ವಿಗುಣ) ದಂಧೆ ಮಿತಿಮೀರುತ್ತಿದ್ದು, ‘ಕಡಿಮೆ ಹೂಡಿಕೆ, ಹೆಚ್ಚು ಲಾಭ’ ಎಂಬ ಆಮಿಷವೊಡ್ಡಿ ಅಮಾಯಕ ಜನರಿಗೆ ವಂಚಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿರುವ ‘ಶ್ರೀ ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಎಂಬ ಕಂಪನಿಯು ಗ್ರಾಹಕರಿಗೆ ದೊಡ್ಡ ಮಟ್ಟದ ಮೋಸ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮನೆಯಲ್ಲಿದ್ದ ಹಣ ಹಾಗೂ ಒಡವೆಗಳನ್ನು ಅಡವಿಟ್ಟು ಮನಿ ಡಬ್ಲಿಂಗ್ ಪ್ಲಾನ್ ತೆಗೆದುಕೊಂಡ ಗ್ರಾಹಕರು ಇದೀಗ ಕಂಗಾಲಾಗಿದ್ದಾರೆ. ಈ ಕಂಪನಿಯು ದೇವನಹಳ್ಳಿ, ಚಿಕ್ಕಜಾಲ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ತನ್ನ ಶಾಖೆಗಳನ್ನು ಹೊಂದಿದ್ದು, ಬೈಚಾಪುರ ಬ್ರಾಂಚ್‌ನಿಂದ ಅತಿ ಹೆಚ್ಚು ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.
ಅಗರಬತ್ತಿ, ಡ್ರೈಫ್ರೂಟ್ಸ್, ಪೇಪರ್ ಪ್ಲೇಟ್ಸ್ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿಕೊಡುವಂತೆ ಹೇಳಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. 1 ಲಕ್ಷ 10 ಸಾವಿರ ರೂಪಾಯಿ ಡೆಪಾಸಿಟ್ ಮಾಡಿದರೆ, 5 ತಿಂಗಳವರೆಗೆ ಪ್ರತಿ ತಿಂಗಳು 23,250 ರೂ. ಲಾಭಾಂಶ ನೀಡುವುದಾಗಿ ಕಂಪನಿ ಆಮಿಷವೊಡ್ಡಿತ್ತು. ಆರಂಭದಲ್ಲಿ ಗ್ರಾಹಕರಿಗೆ ನಂಬಿಕೆ ಬರಿಸಲು ನಾಲ್ಕು ತಿಂಗಳ ಕಾಲ ನಿಯಮಿತವಾಗಿ 23,250 ರೂ.ಗಳನ್ನು ಪಾವತಿಸಿದೆ.
ಆದರೆ, ಐದನೇ ತಿಂಗಳ 23,250 ರೂ. ಹಾಗೂ ಗ್ರಾಹಕರು ಹೂಡಿಕೆ ಮಾಡಿದ್ದ 1 ಲಕ್ಷ 10 ಸಾವಿರ ರೂ. ಅಸಲನ್ನು ಮರುಪಾವತಿಸದೆ ಕಂಪನಿ ಮೀನಾಮೇಷ ಎಣಿಸುತ್ತಿದೆ. ನಮ್ಮ ಡೆಪಾಸಿಟ್ ಹಾಗೂ ಸ್ಯಾಲರಿ ಹಣವನ್ನು ವಾಪಸ್ ಕೊಡಿ ಎಂದು ಗ್ರಾಹಕರು ಗೋಗರೆದರೂ ಕಂಪನಿ ಯಾವುದೇ ಸ್ಪಂದನೆ ನೀಡುತ್ತಿಲ್ಲ.
ತಮ್ಮ ಹಣದ ಬಗ್ಗೆ ಪ್ರಶ್ನೆ ಮಾಡಿದರೆ, ‘ಕಂಪನಿಯ ಅಕೌಂಟ್ ಪ್ರಾಬ್ಲಂ ಆಗಿದೆ’ ಎಂದು ಸಬೂಬು ಹೇಳುವ ಸಿಬ್ಬಂದಿ, ಹಣ ಕೇಳಲು ಹೋದ ಗ್ರಾಹಕರಿಗೆ ನೇರವಾಗಿ ಧಮ್ಕಿ ಹಾಕುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ವಂಚನೆಗೊಳಗಾದ ಗ್ರಾಹಕರು ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಗ್ರಾಹಕರ ಅಳಲಾಗಿದೆ. ಕೂಡಲೇ ಇಂತಹ ಮನಿ ಡಬ್ಲಿಂಗ್ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಕಷ್ಟದ ಹಣವನ್ನು ಮರಳಿಸಬೇಕು ಎಂದು ವಂಚನೆಗೊಳಗಾದ ಜನರು ತೀವ್ರವಾಗಿ ಆಗ್ರಹಿಸಿದ್ದಾರೆ.
