ಕೊಪ್ಪಳ: ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾಲುವೆ ನಿರ್ವಹಣೆಯ ಕೊರತೆಯಿಂದಾಗಿ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಮಂಗಳವಾರ ಮಧ್ಯರಾತ್ರಿ ಭಾರಿ ಅನಾಹುತವೇ ಸೃಷ್ಟಿಯಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ (ರಂಧ್ರ) ಬಿದ್ದು, ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ನೂರಾರು ಎಕರೆ ಭತ್ತದ ಗದ್ದೆ ಹಾಗೂ ರೆಸಾರ್ಟ್‌ಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣ?
ರಾಯಚೂರು ಜಿಲ್ಲೆಯ ಬೇಸಿಗೆಯ ಕುಡಿಯುವ ನೀರಿನ ದಾಹ ತೀರಿಸಲು ತುಂಗಭದ್ರಾ ಡ್ಯಾಮಿನಿಂದ ಮಾರ್ಚ್ 11 ರಿಂದ ನಿರಂತರವಾಗಿ ಎಡದಂಡೆ ಕಾಲುವೆಯ ಮೂಲಕ ನೀರು ಹರಿಸಲಾಗುತ್ತಿತ್ತು. ಮಂಗಳವಾರವೂ ಕಾಲುವೆಯಲ್ಲಿ ಸುಮಾರು 2,300 ಕ್ಯೂಸೆಕ್ಸ್ ನೀರು ಬಿಡಲಾಗಿತ್ತು. ಆದರೆ, ಬಸಾಪುರ ಹತ್ತಿರ ಎಡದಂಡೆಯ ಸಣ್ಣ ಸೇತುವೆ ಬಳಿ ಕಳೆದ ವರ್ಷವೇ ಕಾಲುವೆಗೆ ಬೋಂಗಾ ಬಿದ್ದಿರುವ ಬಗ್ಗೆ ರೈತರು ಜಲಸಂಪನ್ಮೂಲ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ, ಮಂಗಳವಾರ ಮಧ್ಯರಾತ್ರಿ ಸುಮಾರು 60 ಅಡಿಯಷ್ಟು ಕಾಲುವೆ ಕೊಚ್ಚಿಕೊಂಡು ಹೋಗಿ ಈ ಜಲಪ್ರಳಯ ಸೃಷ್ಟಿಯಾಗಿದೆ.
ಕೊಚ್ಚಿಹೋದ ಬೆಳೆ, ರೆಸಾರ್ಟ್‌ಗಳಿಗೆ ಜಲದಿಗ್ಬಂಧನ!
ಕಾಲುವೆ ಒಡೆದ ರಭಸಕ್ಕೆ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ನಾಶವಾಗಿದೆ. ಕೇವಲ ರೈತರ ಜಮೀನುಗಳಷ್ಟೇ ಅಲ್ಲದೆ, ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ರೆಸಾರ್ಟ್‌ಗಳಿಗೂ ನೀರು ನುಗ್ಗಿದೆ. ಪ್ರವಾಹದ ಅಬ್ಬರಕ್ಕೆ ರೆಸಾರ್ಟ್‌ಗಳಲ್ಲಿದ್ದ ಫ್ರಿಡ್ಜ್, ಜನರೇಟರ್, ಬೈಕ್‌ಗಳು ಹಾಗೂ ಇತರ ಬೆಲೆಬಾಳುವ ಸಲಕರಣೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ತಗ್ಗದ ಪ್ರವಾಹ, ಪರಿಹಾರಕ್ಕೆ ರೈತರ ಆಗ್ರಹ
ಅನಾಹುತದ ತೀವ್ರತೆ ಅರಿತ ಡ್ಯಾಮ್ ಅಧಿಕಾರಿಗಳು ತಕ್ಷಣವೇ ನೀರಿನ ಹರಿವನ್ನು ಕಡಿಮೆ ಮಾಡಿದ್ದಾರೆ. ಆದರೆ, ಸಾಣಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಮರಳಿ ಬಸಾಪುರದ ಕಡೆಗೇ ಹರಿದು ಬರುತ್ತಿರುವುದರಿಂದ ಪ್ರವಾಹದ ಭೀತಿ ಇನ್ನೂ ತಗ್ಗಿಲ್ಲ. ಇದರಿಂದ ಮತ್ತಷ್ಟು ಗದ್ದೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಘಟನಾ ಸ್ಥಳಕ್ಕೆ ಜಲಸಂಪನ್ಮೂಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಣ್ಣೆದುರೇ ಬೆಳೆ ನಾಶವಾಗಿ ಕಂಗಾಲಾಗಿರುವ ರೈತರು, ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣವೇ ಪ್ರತಿ ಎಕರೆಗೆ 50,000 ರೂ. ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
